ಬಹುನಿರೀಕ್ಷಿತ "ಯಾನ' ಜುಲೈ 12 ರಂದು ರಾಜ್ಯದಾದ್ಯಂತ ತೆರೆಗೆ

ಬಹುನಿರೀಕ್ಷಿತ "ಯಾನ' ಜುಲೈ 12 ರಂದು ರಾಜ್ಯದಾದ್ಯಂತ ತೆರೆಗೆ

Jun 15, 2019 12:15:07 PM (IST)
ಬಹುನಿರೀಕ್ಷಿತ "ಯಾನ' ಜುಲೈ 12 ರಂದು ರಾಜ್ಯದಾದ್ಯಂತ ತೆರೆಗೆ

ಬೆಂಗಳೂರು: ಬಹುಕಾಲದ ನಂತರ ಕನ್ನಡ ಹಿರಿಯ ನಟ ಅನಂತ್‌ ನಾಗ್‌ -ಸುಹಾಸಿನಿ ಜೋಡಿ ಒಟ್ಟಿಗೆ ನಟಿಸಿರುವ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿರುವ, ಬಹುನಿರೀಕ್ಷಿತ "ಯಾನ" ಕನ್ನಡ ಚಿತ್ರ ಜುಲೈ 12 ರ ಶುಕ್ರವಾರದಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.

ವಿಭಿನ್ನ, ವಿಶೇಷ ಕಥಾ ಹಂದರವನ್ನು ಹೊಂದಿರುವ ಈ ಸಿನೆಮಾವನ್ನು ACME ಮೂವೀಸ್ ಇಂಟರ್ ನ್ಯಾಶನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು 'ಐ' ಎಂಟರ್ಟೈನ್ಮೆಂಟ್'ನ ವಿಜಯಲಕ್ಷಿ ಸಿಂಗ್ ನಿರ್ಮಿಸಿದ್ದು, ಸಿನೆಮಾ ಬಿಡುಗಡೆಗೂ ಮುನ್ನ ಸಿನೆಮಾ ಬಗ್ಗೆ ಸಿನಿ ರಸಿಕರಲ್ಲಿ ಕುತೂಹಲ ಮೂಡಿದೆ.

ಚಿತ್ರದ ಕಥೆ ವಿಭಿನ್ನವಾಗಿದೆ. ಇಂದಿನ ಯುವಪೀಳಿಗೆಯನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿದ್ದು, ಯುವಕ-ಯುವತಿಯರಿಗೆ ಸಿನೆಮಾ ಮೆಚ್ಚಿಗೆಯಾಗಲಿದೆ.

ನಟ ಜೈಜಗದೀಶ್ ಹಾಗು ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್‌ ತಮ್ಮ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು 'ಯಾನ' ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯಿಸಿದ್ದು, ಅವರ ಅಭಿನಯಕ್ಕೆ ಜನ ಫಿದಾ ಆಗುವುದು ಖಂಡಿತ.

ಸಿನೆಮಾವನ್ನು ಚಿತ್ರದುರ್ಗ, ದಾವಣಗೆರೆ, ಮೂಡಿಗೆರೆ, ಗೋವಾ, ಉತ್ತರ ಕರ್ನಾಟಕದ ಯಾನ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ವೈಭವಿ, ವೈನಿಧಿ ಹಾಗೂ ವೈಸಿರಿ ನಾಯಕಿಯರಾಗಿ ನಟಿಸಿದ್ದು, ಇವರಿಗೆ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಒಂದು ಕಾಲದ ಹಾಟ್‌ ಫೇವರಿಟ್‌ ಜೋಡಿ ಅನಂತ್‌ ನಾಗ್‌ ಮತ್ತು ಸುಹಾಸಿನಿ ಈ ಸಿನೆಮಾದಲ್ಲಿ ಒಂದಾಗಿರುವುದು ಸಿನೆಮಾಕ್ಕೆ ಮತ್ತೊಂದು ಹೆಗ್ಗಳಿಕೆಯಾಗಿದೆ.

ಹೊಸ ನೀರು ಚಿತ್ರದಲ್ಲಿ ಅನಂತ್‌ ನಾಗ್ ಮತ್ತು ಸುಹಾಸಿನಿ ಈ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆನಂತರ ಇಬ್ಬರೂ ಎಂಟು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಯಾನ ಇವರ ಒಂಭತ್ತನೇ ಚಿತ್ರವಾಗಿದೆ. ಈ ಜೋಡಿ ಮತ್ತೆ ಒಂದಾಗುವ ಮೂಲಕ ಕನ್ನಡ ಸಿನೆಮಾ ರಂಗದಲ್ಲಿ ಹಲವು ಹಿಟ್ ಸಿನೆಮಾವನ್ನು ನೀಡಿದೆ.

ಇನ್ನುಳಿದಂತೆ ಚಿತ್ರದಲ್ಲಿ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಗಡ್ದಪ್ಪ, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಮುಂತಾದವರು ನಟಿಸಿದ್ದಾರೆ.

ವಿಜಯಲಕ್ಷ್ಮೀಸಿಂಗ್ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಜಯಲಕ್ಷ್ಮೀಸಿಂಗ್ ಹಾಗೂ ಸುಹಾಸ್ ಗಂಗಾಧರ್ ಚಿತ್ರಕಥೆ ಬರೆದಿದ್ದಾರೆ.

ಸುನಿ ಹಾಗೂ ಅಭಿಷೇಕ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಕರ್ಮ್ ಚಾವ್ಲಾ ಅವರ ಛಾಯಾಗ್ರಹಣವಿದೆ

ಈ ಚಿತ್ರದಲ್ಲಿ ಟ್ರಾವೆಲ್‌ ಕೂಡಾ ಪ್ರಮುಖ ಅಂಶವಾಗಿದ್ದು, ಅದಕ್ಕೆ ಪೂರಕವಾಗಿ ಕವಿರಾಜ್‌ ಬರೆದಿರುವ, ಖ್ಯಾತ ಗಾಯಕ ರಘು ದೀಕ್ಷಿತ್ ಹಾಡಿರುವ “ಗರಿಬಿಚ್ಚಿ ಮರಿಹಕ್ಕಿ ಅದೆಲ್ಲೋ ಹಾರಿ ಹೊಂಟಿವೇ …’ ಎಂಬ ಹಾಡು ಸಿನೆಮಾ ಬಿಡುಗಡೆಗೂ ಮುನ್ನವೇ ಹಿಟ್ ಆಗಿದೆ.

ಫ್ಯೂಶನ್‌ ಶೈಲಿಯಲ್ಲಿರುವ ಈ ಹಾಡು ಲಹರಿ ಸಂಸ್ಥೆಯ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿತ್ತು.

ಚಿತ್ರದ ಹಾಡುಗಳನ್ನು ಜಯಂತ್‌ ಕಾಯ್ಕಿಣಿ, ಯೋಗರಾಜ್‌ ಭಟ್‌, ಹೃದಯ ಶಿವ, ಶಶಾಂಕ್‌ ಹಾಗೂ ಚೇತನ್‌ ಕುಮಾರ್‌ ಬರೆದಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಒಂದಕ್ಕಿಂತಲೂ ಒಂದು ಹಿಟ್ ಆಗಿದೆ.

ಈ ಸಿನೆಮಾಗೂ ಮುನ್ನ ಹರೀಶ್‌ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್‌ ಅವರು ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ 'ಮಾರ್ಚ್‌ 22' ಚಿತ್ರ ನಿರ್ಮಿಸಿದ್ದರು. ಈ ಸಿನೆಮಾಕ್ಕೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಅರಸಿ ಬಂದಿದ್ದವು. ಜೊತೆಗೆ ಮಾಧ್ಯಮಗಳ ಮೆಚ್ಚುಗೆಯನ್ನು ಗಳಿಸಿತ್ತು. ಅನಂತರ ಅನಂತ್ ನಾಗ್ ಅಭಿನಯದ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನೆಮಾ ನಿರ್ಮಿಸಿದ್ದು, ಅದು ಕೂಡ ಹಿಟ್ ಆಗಿತ್ತು.

 

More Images