ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿದ ನಟಿ ಶುಭಾ ಪೂಂಜಾ

ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿದ ನಟಿ ಶುಭಾ ಪೂಂಜಾ

SB   ¦    Mar 12, 2018 08:30:37 PM (IST)
ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿದ ನಟಿ ಶುಭಾ ಪೂಂಜಾ

ಕಾರವಾರ: ಕಾಳಿ ನದಿ ದಂಡೆಯಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಯುವಜನ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ನೂತನ ಕಟ್ಟಡದಲ್ಲಿ ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರದ ಕಚೇರಿಯನ್ನು ಸೋಮವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಕನ್ನಡ ಚಿತ್ರರಂಗದ ನಟಿ ಶುಭಾ ಪೂಂಜಾ, ಸುಕೃತಾ ದೇಶಪಾಂಡೆ ಅವರು ಉದ್ಘಾಟಿಸಿದರು.

ಬಳಿಕ ನಟಿ ಶುಭಾ ಪೂಂಜಾ ಮಾತನಾಡಿ, ಸ್ಕೂಬಾ ಚಟುವಟಿಕೆಗಳು ಕಾರವಾರ ಹಾಗೂ ಮುರುಡೇಶ್ವರದಲ್ಲಿ ಆರಂಭವಾಗಿರುವುದು ಸಂತೋಷ. ಸ್ಕೂಬಾ ಮಾಡಲು ಮೊದಲು ವಿದೇಶಕ್ಕೆ ಹೋಗಬೇಕಿತ್ತು. ಇದೀಗ ಕರ್ನಾಟಕದ ಕರಾವಳಿಯಲ್ಲಿ ಸಾಹಸಿ ಪ್ರವಾಸಿಗಳಿಗೆ ಸಿಗುತ್ತಿದೆ ಎಂಬುದೇ ಸಂಭ್ರಮ, ಇದರಿಂದ ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿದೆ ಎಂದರು. ಕಾರವಾರದಲ್ಲಿ ಸ್ಕೂಬಾ ತರಬೇತಿ ಕೇಂದ್ರವನ್ನು ಬಾರ್ನ್ ವೈಲ್ಡ್ ಸಂಸ್ಥೆ ಜಂಗಲ್ ಲಾಡ್ಜ್‌ಸ್ ಸಹಯೋಗದಲ್ಲಿ ಆರಂಭಿಸಿರುವುದು ಸ್ವಾಗತಾರ್ಹವಾದುದು. ಇದರಿಂದ ಸ್ಕೂಬಾ ತರಬೇತಿ ನೀಡುವವರು ನಮ್ಮಲ್ಲೇ ತಯಾರಾಗುತ್ತಾರೆ. ಅಲ್ಲದೇ ಪ್ರವಾಸಿಗರಿಗೆ ಸ್ಕೂಬಾ ಮಾಡುವ ಸೌಲಭ್ಯ ಸದಾ ಸಿಗುತ್ತದೆ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರದಲ್ಲಿ ಸ್ಥಳೀಯರೇ ತರಬೇತಿ ಪಡೆದು, ತಾವೇ ಸ್ವತಃ ಸ್ಕೂಬಾ ಸಂಸ್ಥೆ ನಡೆಸಬಹುದು. ವಿದೇಶಗಳಿಗೆ ಸ್ಕೂಬಾ ತರಬೇತುದಾರರಾಗಿ ತೆರಳುವ ಅವಕಾಶವಿದೆ. ಇದು ಸಹ ಸ್ವಯಂ ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡಲಿದೆ. ಬರುವ ದಿನಗಳಲ್ಲಿ ಪ್ರವಾಸೋದ್ಯಮವೇ ಇಲ್ಲಿನ ಯುವಕರ ಕೈ ಹಿಡಿಯಲಿದೆ. ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವು ಬೆಳೆಯಲು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದ್ದೇವೆ. ಇದನ್ನು ಕಾಪಾಡಿಕೊಂಡು, ಸಾಹಸಿ ಚಟುವಟಿಕೆಗಳ ಮೂಲಕ ಪ್ರವಾಸಿಗರನ್ನು ಸೆಳೆಯಬೇಕಿದೆ.

ಜಲ ಸಾಹಸದಲ್ಲಿ ಅನೇಕ ಅವಕಾಶಗಳಿವೆ. ತರಬೇತಿಯನ್ನು ಇನ್ನು ಕಾರವಾರದಲ್ಲಿದ್ದೇ ಪಡೆದುಕೊಳ್ಳಬಹುದು. ತರಬೇತಿ ಪಡೆದ ನಂತರ ಪ್ರಮಾಣಪತ್ರ ಸಹ ನೀಡಲಾಗುವುದು. ತರಬೇತಿಗೆ ಬರುವವರಿಗೆ ಈ ನೂತನ ಕಟ್ಟಡದಲ್ಲಿ ಉಳಿಯಲು ಅವಕಾಶವಿದೆ. ಇದೇ ಕೇಂದ್ರದಲ್ಲಿ ಪ್ಯಾರಾ ಗ್ಲೈಡಿಂಗ್ ಕಚೇರಿ, ಜಂಗಲ್ ಲಾಡ್ಜ್‌ಸ್ ಕಚೇರಿ ಕಾರ್ಯನಿರ್ವಹಿಸುವ ಕಾರಣ ಪ್ರವಾಸಿಗರಿಗೆ ಸಹ ಇಲ್ಲಿನ ಎಲ್ಲಾ ತಾಣಗಳ ಅವಕಾಶ ಪಡೆಯಲು ಅನುಕೂಲವಾಗಲಿದೆ ಎಂದರು. ಅಪರ ಜಿಲ್ಲಾಧಿಕಾರಿ ಪ್ರಸನ್ನ, ಜಂಗಲ್ ಲಾಡ್ಜಸ್ ಮ್ಯಾನೇಜರ್ ಪಿ.ಆರ್.ನಾಯ್ಕ ಇದ್ದರು.

More Images