ಬಾಲಿವುಡ್ ನ ಹಿರಿಯ ನಟ ಶಶಿ ಕಪೂರ್ ಇನ್ನಿಲ್ಲ

ಬಾಲಿವುಡ್ ನ ಹಿರಿಯ ನಟ ಶಶಿ ಕಪೂರ್ ಇನ್ನಿಲ್ಲ

HSA   ¦    Dec 04, 2017 06:42:44 PM (IST)
ಬಾಲಿವುಡ್ ನ ಹಿರಿಯ ನಟ ಶಶಿ ಕಪೂರ್ ಇನ್ನಿಲ್ಲ

ಮುಂಬಯಿ: ಬಾಲಿವುಡ್ ನ ಹಿರಿಯ ಸೂಪರ್ ಸ್ಟಾರ್ ಶಶಿ ಕಪೂರ್ ಅವರು ಸೋಮವಾರ ಸಂಜೆ ವೇಳೆ ಅಲ್ಪಕಾಲದ ಅಸೌಖ್ಯದಿಂದ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮುಂಬಯಿಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಪೂರ್ ಅವರು ಇಂದು ಸಂಜೆ ಕೊನೆಯುಸಿರೆಳೆದರು ಎಂದು ವರದಿಗಳು ಹೇಳಿವೆ.

ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ 79ರ ಹರೆಯದ ಶಶಿ ಕಪೂರ್ ಅವರು ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿದ್ದರು. ಶಶಿ ಕಪೂರ್ ಅವರು ಅಮಿತಾಭ್ ಜತೆಗೆ ಮಾಡಿದ್ದ ದಿವಾರ್ ಚಿತ್ರ ಈಗಲೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಅಮಿತಾಬ್ ಜತೆಗೆ ಶಶಿ ಕಪೂರ್ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಸತ್ಯಂ ಶಿವಂ ಸುಂದರಂ, ಜುನೂನ್, ಶಾನ್ ಮತ್ತು ನಮಕ್ ಹಲಾಲ್ ಚಿತ್ರಗಳು ಶಶಿ ಕಪೂರ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದವು.

2011ರಲ್ಲಿ ಶಶಿ ಕಪೂರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2015ರಲ್ಲಿ ಅವರು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದಿದ್ದರು.

ಮಕ್ಕಳಾದ ಸಂಜನಾ, ಕುನಾಲ್ ಮತ್ತು ಕರಣ್ ಅವರನ್ನು ಶಶಿ ಕಪೂರ್ ಅಗಲಿದ್ದಾರೆ. ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.