ಮತ್ತೆ ಸಂಕಷ್ಟದಲ್ಲಿ ಸಲ್ಮಾನ್ ಖಾನ್

ಮತ್ತೆ ಸಂಕಷ್ಟದಲ್ಲಿ ಸಲ್ಮಾನ್ ಖಾನ್

YK   ¦    Jul 08, 2018 02:33:50 PM (IST)
ಮತ್ತೆ ಸಂಕಷ್ಟದಲ್ಲಿ ಸಲ್ಮಾನ್ ಖಾನ್

ಮುಂಬೈ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಿಲುಕಿದ್ದ ಬಾಲಿವುಡ್ ಭಾಯ್ ಜಾನ್ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನ ಪಾನ್ವಾಲಾದಲ್ಲಿರೋ ಬಾಲಿವುಡ್ ನಟರ ಫಾರ್ಮ್ ಹೌಸ್ ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಸಲ್ಮಾನ್ ಖಾನ್ ಜೊತೆ ಕುಟುಂಬದ 5 ಮಂದಿಯ ವಿರುದ್ಧ ನೋಟಿಸ್ ಜಾರಿಯಾಗಿದೆ.

ಮಹಾರಾಷ್ಟ್ರದ ಅರಣ್ಯ ಇಲಾಖೆ ಜೂನ್ 9ರಂದು ಈ ನೋಟಿಸ್ ಜಾರಿ ಮಾಡಿದೆ. ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ರಾಯ್ ಗಡ್ ಜಿಲ್ಲೆಯ ಪಕ್ಕದ ಪಾನ್ವಾಲಾದಲ್ಲಿ ಆಸ್ತಿ ಹೊಂದಿದ್ದು, ಈತ ಬಾಲಿವುಡ್ ನಟನ ತಂದೆ ಸಲೀಂ ಖಾನ್ ವಿರುದ್ಧ ದೂರು ನೀಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೋಟಿಸ್ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ಪ್ರತಿಕ್ರಿಯಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಪಾನ್ವಾಲಾ ವಾಜಪುರ ಪ್ರದೇಶದಲ್ಲಿ ಅರ್ಪಿತಾ ಫಾಮ್ಸ್ ಆಸ್ತಿಯ ಮಾಲೀಕತ್ವದ ಹಕ್ಕುಗಳು ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಹಾಗೂ ಸಹೋದರರಾದ ಅರ್ಬಾಜ್, ಸೊಹೈಲ್ ಮತ್ತು ತಾಯಿ ಹೆಲೆನ್ ಅವರೊಂದಿಗೆ ಉಳಿದಿವೆ ಅಂತ ನೋಟಿಸ್ ನಲ್ಲಿ ಹೇಳಲಾಗಿದೆ. ಏಳು ದಿನಗಳ ಬಳಿಕ ಖಾನ್ ಕುಟುಂಬದ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದ್ದಾರೆ.

ಈ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ಅವರನ್ನು ಕೇಳಿದಾಗ, ಕಟ್ಟಡ ನಿರ್ಮಾಣದ ಕೆಲಸ ಮಾಡುವ ಮೊದಲು ಕಾನೂನು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಎಲ್ಲಾ ವಿನ್ಯಾಸಗಳನ್ನು ಕ್ರಮಬದ್ಧಗೊಳಿಸಲಾಗಿದ್ದು, ಅಗತ್ಯವಿರುವ ಶುಲ್ಕಗಳನ್ನು ಕೂಡ ಪಾವತಿಸಲಾಗಿದೆ. ಹೀಗಾಗಿ, ಇದು ಅಕ್ರಮ ನಿರ್ಮಾಣ ಅಲ್ಲ ಎಂಬುದಾಗಿ ತಿಳಿಸಿದ್ದಾರೆ.