`ಗಿಣಿ ಹೇಳಿದ ಕಥೆ' ಕೇಳಲು ಮುಂದಾದ ಚಿತ್ರರಂಗ

`ಗಿಣಿ ಹೇಳಿದ ಕಥೆ' ಕೇಳಲು ಮುಂದಾದ ಚಿತ್ರರಂಗ

Rajath Shetty   ¦    Jan 10, 2019 03:03:11 PM (IST)
`ಗಿಣಿ ಹೇಳಿದ ಕಥೆ' ಕೇಳಲು ಮುಂದಾದ ಚಿತ್ರರಂಗ

ಐತಿಹಾಸಿಕ ಕಥೆ, ಪೌರಾಣಿಕ ಕಥೆ, ಸಾಮಾಜಿಕ ಕಥೆ, ಅವರ ಕಥೆ, ಇವರ ಕಥೆಯಲ್ಲ ನೀವು ನೋಡಿದ್ದೀರಿ. ಹಾಗಾದರೆ ಈ ವಾರ 'ಗಿಣಿ ಹೇಳಿದ ಕಥೆ' ನಿಮ್ಮ ಮುಂದೆ ಬರ್ತಿದೆ. ಹೌದು, ಶೀರ್ಷಿಕೆ, ಟ್ರೈಲರ್ ಹಾಗೂ ಹಾಡುಗಳಿಂದ ಭರವಸೆ ಮೂಡಿಸಿರುವ 'ಗಿಣಿ ಹೇಳಿದ ಕಥೆ' ಜನವರಿ 11 ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದೆ.

ಬುದ್ಧ ಚಿತ್ರಾಲಯ ಲಾಂಛನದಲ್ಲಿ ದೇವ್ ನಿರ್ಮಿಸಿರುವ 'ಗಿಣಿ ಹೇಳಿದ ಕಥೆ' ಚಿತ್ರಕ್ಕೆ ಅವರೇ ನಾಯಕ. ಈ ಚಿತ್ರದ ಇನ್ನೊಂದು ವಿಶೇಷ ಅಂದ್ರೆ ನಟನೆ, ನಿರ್ಮಾಣದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆ ಕೂಡ ಅವರದ್ದೇ. ಚಿತ್ರದ ಇಡೀ ಜವಾಬ್ದಾರಿಯನ್ನು ತಾವೇ ಹೆಗಲ ಮೇಲೆ ಹಾಕಿ ಸಿನಿಮಾ ಮಾಡಿ ರಿಲೀಸ್ ಗೆ ತಂದಿದ್ದಾರೆ. ಬೆಂಗಳೂರಿನಿಂದ ಮಡಿಕೇರಿಗೆ ಪ್ರಯಾಣ ಬೆಳೆಸುವಾಗ ವಾಹನದ ಚಾಲಕ ಪ್ಯಾಸೆಂಜರ್ ಗೆ ಕಥೆ ಹೇಳುವುದು ಈ ಚಿತ್ರದ ಕಥಾವಸ್ತು.

ಈ ಕಥೆಯಲ್ಲಿ ಲವ್, ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇರಲಿದ್ದು, ಅಂತಿಮವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲಿದೆ ಎಂಬ ಭರವಸೆ ಚಿತ್ರತಂಡದ್ದು. ಗೀತಾಂಜಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶಿಕ್ಷಕಿ ಪಾತ್ರದಲ್ಲಿ ಪಡ್ಡೆ ಹೈಕ್ಳ ದಿಲ್ ಕದಿಯಲು ಸಜ್ಜಾಗಿದ್ದಾರೆ. ಇನ್ನುಳಿದಂತೆ ಈ ಚಿತ್ರದಲ್ಲಿ ಬಹುಪಾಲು ರಂಗಭೂಮಿ ಕಲಾವಿದರುಗಳು ಅಭಿನಯಿಸಿದ್ದಾರೆ. ದೇವ್, ಗೀತಾಂಜಲಿ, ಜೊತೆಗೆ ಮಾಲತೇಶ್, ನೀತುರಾಯ್, ಹಾವೇರಿ ಶ್ರೀಧರ್, ಮಹಂತೇಶ್, ಮುಂತಾದವರಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನು ನಿರ್ದೇಶನ ಮಾಡಿರೋದು ನಾಗರಾಜ್ ಉಪ್ಪುಂದ. ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯೂ ಇವರದ್ದೇ. ಹಿತನ್ ಹಾಸನ್ ಅವರು ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಬೆಂಗಳೂರು-ಮೈಸೂರು-ಮಡಿಕೇರಿ-ದಕ್ಷಿಣ ಕನ್ನಡ ಸುತ್ತಮುತ್ತ ನಡೆದಿದೆ. ಇಷ್ಟೆಲ್ಲಾ ವಿಶೇಷತೆಗಳ ಪ್ಯಾಕೆಜ್ ಹೊತ್ತು ಈ ವಾರ ತೆರೆಮೇಲೆ ಅದೃಷ್ಟ ಪರೀಕ್ಷಿಸಲು ಗಿಣಿ ಬರ್ತಿದೆ.