ನವದೆಹಲಿ: ತುಳು ಸಿನಿಮಾ `ಪಡ್ಡಾಯಿ’ ಮತ್ತು ಕನ್ನಡದ `ಹೆಬ್ಬೆಟ್ಟು ರಾಮಕ್ಕ’ ಚಿತ್ರವು 65ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಭಾಗದ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ನಿತ್ಯಾನಂದ ಪೈ ನಿರ್ಮಾಣ ಹಾಗೂ ಅಭಯ್ ಸಿಂಹ ನಿರ್ದೇಶನದ `ಪಡ್ಡಾಯಿ’ ಚಿತ್ರವು ಉತ್ತಮ ತುಳು ಸಿನಿಮಾ ಪ್ರಶಸ್ತಿಗೆ ಪಡೆದುಕೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿ ಅಕ್ಷಯ್ ಕುಮಾರ್ ಪಾಲಾದರೆ, ಇತ್ತೀಚೆಗಷ್ಟೇ ನಿಧನರಾಗಿರುವ ಶ್ರೀದೇವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೆಲುಗಿನ `ಬಾಹುಬಲಿ-2’ ಚಿತ್ರವು ಜನಪ್ರಿಯ ಸಿನಿಮಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ತಮಿಳಿನ `ಟು ಲೆಟ್’, ತೆಲುಗಿನ `ಘಾಜಿ’, ಗುಜರಾತಿಯ `ಧಾ’, ಹಿಂದಿಯ `ನ್ಯೂಟನ್’, ಮರಾಠಿಯ `ಕಚ್ಛಾಲಿಂಬೂ’, ಅಸ್ಸಾಮಿಯಾ `ಈಶೂ’, ಬಂಗಾಳಿಯ `ಮಯೂರಾಕ್ಷಿ’ ಸಿನಿಮಾಗಳು ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ವಿಭಾಗದ ಪ್ರಶಸ್ತಿ ಪಡೆದಿದೆ.
`ಲಡಾಖ್ ಚಲೇ ರಿಕ್ಷಾ ವಾಲೇ’(ಬಂಗಾಳಿ) ಅತ್ಯುತ್ತಮ ಸಾಹಸಮಯ ಸಿನಿಮಾ, ಅತ್ಯುತ್ತಮ ತನಿಖಾ ಸಿನಿಮಾವಾಗಿ ‘1984 when the sun diid not rise’, ಅತ್ಯುತ್ತಮ ಅನಿಮೇಶನ್ ಚಿತ್ರವಾಗಿ `ಫಿಶ್ ಕರಿ’, ಅತ್ಯುತ್ತಮ ಕಿರುಚಿತ್ರ `ಮಯತ್’, ಕೌಟುಂಬಿಕ ಮೌಲ್ಯಗಳ ಅತ್ಯುತ್ತಮ ಚಿತ್ರವಾಗಿ `ಹ್ಯಾಪಿ ಬರ್ತ್ ಡೇ’, ಉತ್ತಮ ಸಿನಿಮಾಟೋಗ್ರಫಿ ಸಿನಿಮಾವಾಗಿ `ಐ ಟೆಸ್ಟ್’ ಆಯ್ಕೆಯಾಗಿದೆ.
'ಮಾರ್ಚ್ 22' ಗೆ ಉತ್ತಮ ಸಾಹಿತ್ಯ ಪ್ರಶಸ್ತಿ
ಅನಿವಾಸಿ ಭಾರತೀಯ ಉದ್ಯಮಿ ಹರೀಶ್ ಶೇರಿಗಾರ್ ಅವರು ನಿರ್ಮಿಸಿರುವ `ಮಾರ್ಚ್ 22' ಚಿತ್ರವು ಉತ್ತಮ ಸಾಹಿತ್ಯ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಅವರು ಎಸಿಎಂಇ ಮೂವೀಸ್ ಇಂಟರ್ ನ್ಯಾಶನಲ್ ಬ್ಯಾನರ್ ನಡಿಯಲ್ಲಿ `ಮಾರ್ಚ್ 22' ಚಿತ್ರ ನಿರ್ಮಿಸಿದ್ದರು. ಆಗಸ್ಟ್ 25, 2017ರಲ್ಲಿ ಇದು ಕರ್ನಾಟಕದಾದ್ಯಂತ ಬಿಡುಗಡೆಯಾಗಿತ್ತು.