ಕೊಡವ ಭಾಷೆಯ ಪ್ರಥಮ ಮಕ್ಕಳ ಚಲನಚಿತ್ರ ‘ಮಕ್ಕಡ ಮನಸ್ಸ್’ ಶ್ರೀಘ್ರ ಬೆಳ್ಳಿತೆರೆಗೆ

ಕೊಡವ ಭಾಷೆಯ ಪ್ರಥಮ ಮಕ್ಕಳ ಚಲನಚಿತ್ರ ‘ಮಕ್ಕಡ ಮನಸ್ಸ್’ ಶ್ರೀಘ್ರ ಬೆಳ್ಳಿತೆರೆಗೆ

CI   ¦    Jan 18, 2020 07:21:01 PM (IST)
ಕೊಡವ ಭಾಷೆಯ ಪ್ರಥಮ ಮಕ್ಕಳ ಚಲನಚಿತ್ರ ‘ಮಕ್ಕಡ ಮನಸ್ಸ್’ ಶ್ರೀಘ್ರ ಬೆಳ್ಳಿತೆರೆಗೆ

ಮಡಿಕೇರಿ: ಜೀವನೋಪಾಯಕ್ಕಾಗಿ ಮನೆ ಮಂದಿ ಮಾಡುವ ಕೆಲಸಗಳು ಪುಟಾಣಿ ಮನಸ್ಸಿನ ಮೇಲೆ ಮೂಡುವ ಪರಿಣಾಮಗಳನ್ನು ಆಧರಿಸಿದ ಕೊಡವ ಭಾಷೆಯ ಪ್ರಥಮ ಮಕ್ಕಳ ಚಲನಚಿತ್ರ ‘ಮಕ್ಕಡ ಮನಸ್ಸ್’ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ.

ಬಹುನಿರೀಕ್ಷೆಯ ಕೊಡವ ಭಾಷೆಯ ಮಕ್ಕಡ ಮನಸ್ಸ್ ಚಲನ ಚಿತ್ರದ ಪ್ರೀಮಿಯರ್ ಶೋವನ್ನು  ಕೊಡಗಿನ ಗಣ್ಯರಿಗೆ, ಚಲನಚಿತ್ರದ ಪ್ರಮುಖರಿಗಾಗಿ ಜ.25 ರಂದು ಏರ್ಪಡಿಸಲಾಗಿದೆ. ಬಳಿಕ ಜಿಲ್ಲೆಯ ಎಲ್ಲಾ ಕಡೆಗಳಲ್ಲು ವೀಕ್ಷಣೆಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿರುವುದಾಗಿ ಚಲನಚಿತ್ರಕ್ಕೆ ಸಾಹಿತ್ಯ ನೀಡಿರುವ ಕಾಳಿಮಾಡ ದಿನೇಶ್ ನಾಚಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೊಳ್ಳಿಮಡ ಡಾಟಿ ಉತ್ತಪ್ಪ ಅವರು ನಿರ್ಮಿಸಿರುವ ‘ಮಕ್ಕಡ ಮನಸ್ಸ್’ ಚಲನಚಿತ್ರವನ್ನು ಸೋಲೋಮನ್ ಕುರಿಯನ್ ನಿರ್ದೇಶಿಸಿದ್ದಾರೆ. ಪ್ರಶಸ್ತಿ ವಿಜೇತ ಖ್ಯಾತ ಛಾಯಾಗ್ರಾಹಕ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ ಮಾಡಿದ್ದು, ಇವರು ಕನ್ನಡದ ಇತ್ತೀಚಿನ ಆಯುಷ್ಮಾನ್ ಭವ ಚಲನಚಿತ್ರದಲ್ಲೂ ಕಾರ್ಯನಿರ್ವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಚಿತ್ರದಲ್ಲಿ ಕೊಡವ ಭಾಷೆಯೊಂದಿಗೆ ವ್ಯಾವಹಾರಿಕ ಭಾಷೆಯಾದ ಕನ್ನಡ ಮತ್ತು ಇಂಗ್ಲಿಷ್‍ನ್ನು ಬಳಸಿಕೊಳ್ಳಲಾಗಿದೆ. ಈ ಚಿತ್ರವನ್ನು ಅಥ್ಲಿಟ್ ಅರ್ಜುನ್ ದೇವಯ್ಯ ಮತ್ತು ಅಶ್ವಿನಿ ನಾಚಪ್ಪ ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ಮಾಡಲಾಗಿದ್ದು, ಕೊಡವ ಮತ್ತು ಕನ್ನಡ ಭಾಷೆಯ ಎರಡು ಹಾಡುಗಳಿವೆ. ಕೊಡಗಿನ ಕಲಾವಿದರೂ ಅಭಿನಯಿಸಿರುವ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ, ಇವರು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರೊಂದಿಗೆ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ ಎಂದರು.

ಚಿತ್ರದ ನಾಯಕನಾಗಿ ಬಾಲಕ ವರುಣ್ ಗೌಡ, ನಾಯಕಿಯಾಗಿ ಬೊಳಿಯಾಡಿರ ದಕ್ಷಿತ ನಟಿಸಿದ್ದಾರೆ. ವಿತರಕರಾಗಿ ಜಾನ್ ಪುಲಿಕಲ್ ಮತ್ತು ರಾಕಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೊಡಗಿನ ಕಲಾವಿದರಾದ ಸಂತೋಷ್ ಮಾದಪ್ಪ, ಬೊಳ್ಳಿಮಾಡ ಪ್ರಜ್ಞಾ, ವಾಂಚೀರ ನಾಣಯ್ಯ, ಜಯ ಮಂಜಪ್ಪ, ಕೊಟ್ಟುಕತ್ತಿರ ಪ್ರಕಾಶ್ ಸೇರಿದಂತೆ  ಹಲವರು ನಟಿಸಿದ್ದಾರೆ.

ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನೀಡಿರುವ ಗಂಗಾಧರ ಅವರು ಮಾತನಾಡಿ, ಕೊಡಗಿನ ಕಕ್ಕಬ್ಬೆ, ವೀರಾಜಪೇಟೆ ಶಾಲೆ ಸೇರಿದಂತೆ ವಿವಿಧ ಭಾಗಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ “ಮಕ್ಕಡ ಮನಸ್” ಪ್ರದರ್ಶನಗೊಳ್ಳಲಿದ್ದು, ರಾಷ್ಟ್ರೀಯ ಪ್ರಶಸ್ತಿಗೂ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು. ಕೊಡಗಿನ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಸಂಭಾಷಣೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ಬೊಳಿಯಾಡಿರ ದಕ್ಷಿತ, ಬಾಲ ನಟ ವರುಣ್ ಗೌಡ, ಛಾಯಾಗ್ರಾಹಕ ಪಿ.ಕೆ.ಹೆಚ್.ದಾಸ್ ಹಾಗೂ ಬೊಳ್ಳಿಮಡ ಡಾಟಿ ಉತ್ತಯ್ಯ ಉಪಸ್ಥಿತರಿದ್ದರು.