ಮಾದಕ ಪದಾರ್ಥ ಬಳಕೆ ವಿರುದ್ಧ ಜಾಗೃತಿಗೆ ಸಿದ್ಧವಾಗಿದೆ ಕಿರುಚಿತ್ರ

ಮಾದಕ ಪದಾರ್ಥ ಬಳಕೆ ವಿರುದ್ಧ ಜಾಗೃತಿಗೆ ಸಿದ್ಧವಾಗಿದೆ ಕಿರುಚಿತ್ರ

SK   ¦    Jun 25, 2019 06:13:32 PM (IST)
ಮಾದಕ ಪದಾರ್ಥ ಬಳಕೆ ವಿರುದ್ಧ ಜಾಗೃತಿಗೆ ಸಿದ್ಧವಾಗಿದೆ ಕಿರುಚಿತ್ರ

ಕಾಸರಗೋಡು: ಮದ್ಯ ಮತ್ತು ಮಾದಕ ಪದಾರ್ಥ ಬಳಕೆ ಪರಿಣಾಮ ಹಾದಿ ತಪ್ಪುತ್ತಿರುವ ಯುಜನತೆ ಮತ್ತು ಕುಟುಂಬಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ "ಕನಲೆರಿಯುಂ ಬಾಲ್ಯಂ(ಬೆಂಕಿಯಲ್ಲಿ ಸುಡುವ ಬಾಲ್ಯ)" ಎಂಬ ಕಿರುಚಿತ್ರವೊಂದು ಸಿದ್ಧವಾಗಿದೆ.

ಕಿನಾನೂರು-ಕರಿಂದಳಂ ಗ್ರಾಪಂಚಾಯತ್ ವತಿಯಿಂದ ರಾಜ್ಯ ಅಬಕಾರಿ,ಆರೋಗ್ಯ, ಶಿಕ್ಷಣ ಇಲಾಖೆಗಳ ಸಹಕಾರದೊಂದಿಗೆ ಈ ಚಿತ್ರ ನಿರ್ಮಾಣ ನಡೆದಿದೆ. ವಿಜ್ಯೋರ್ ಫಿಲಂಸ್ ಲಾಂಛನದಡಿ ನಿರ್ಮಿಸಲಾಗುವ ಚಿತ್ರಕ್ಕೆ ಅಜಿ ಕುಟ್ಟಮತ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ, ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ "ವಿಷಕಾಟ್(ವಿಷಗಾಳಿ)" ಎಂಬ ಸಿನಿಮಾ ಈಗಾಗಲೇ ಜನಪ್ರಿಯವಾಗಿದೆ. ಅಬಕಾರಿ ಇಲಾಖೆ ಜಾರಿಗೊಳಿಸುವ "ವಿಮುಕ್ತಿ" ಯೋಜನೆಯ ಅಂಗವಾಗಿ ಈ ಕಿರುಚಿತ್ರ ಸಿದ್ಧಗೊಂಡಿದೆ.

ಮಾದಕ ಪದಾರ್ಥಗಳ ಬಳಕೆ ವಿರುದ್ಧ ಸಾಧಾರಣ ಗತಿಯಲ್ಲಿ ನಡೆಸುವ ಜಾಗೃತಿ ತರಗತಿ ಇತ್ಯಾದಿಗಳಿಗಿಂತ ಭಿನ್ನವಾಗಿ ಹೆಚ್ಚುವರಿ ಪರಿಣಾಮ ನೀಡಲಿದೆ ಎಂಬ ಕಾರಣಕ್ಕಾಗಿ ಕಿರುಚಿತ್ರ ನಿರ್ಮಿಸುವ ಯೋಜನೆ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ಹಮ್ಮಿಕೊಂಡಿದೆ. ಇದಕ್ಕೆ ವಿವಿಧ ಇಲಾಖೆಗಳ ಬೆಂಬಲವೂ ಲಭಿಸಿದಾಗ ನಿರೀಕ್ಷೆಗೂ ಮೀರಿ ತ್ವರಿತ ಗತಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಗಿತ್ತು ಎಂದು ಚಿತ್ರ ನಿರ್ದೇಶಕ ಅಜಿ ಕುಟ್ಟಮತ್ ತಿಳಿಸಿದರು.

ಕಾಸರಗೋಡು, ಪರಪ್ಪ,ನೀಲೇಶ್ವರಂ, ಶಿವಮೊಗ್ಗ, ವಳಪಟ್ಟಣಂ ಮೊದಲಾದ ಪ್ರದೇಶಗಳಲ್ಲಿ ಈ ಕಿರುಚಿತ್ರದ ಚಿತ್ರೀಕರಣ ನಡೆದಿದ್ದು, 90ಕ್ಕೂ ಅಧಿಕ ಮಂದಿ ಅಭಿನಯಿಸಿದ್ದಾರೆ. ಒಂದೂವರೆ ಗಂಟೆ ಅವಧಿಯ ಈ ಕಿರುಚಿತ್ರ ಮುಂದಿನ ತಿಂಗಳ ಮೊದಲ ವಾರ ಬಿಡುಗಡೆಗೊಳ್ಳಲಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಚಾಯೋತ್ ಶಾಲೆಯಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಚಿತ್ರಿಕರಣಕ್ಕೆ ಸ್ವಿಚ್ ಆನ್ ನಡೆಸಿ ಚಾಲನೆ ನೀಡಿದ್ದರು. ರಾಜ್ಯಾದ್ಯಂತ ಶಿಕ್ಷಣಾಲಯಗಳಲ್ಲಿ ಈ ಚಿತ್ರ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.