ನಟ ಉಪೇಂದ್ರ ರಾಜಕೀಯ ಸೇರ್ತಾರಂತೆ…

ನಟ ಉಪೇಂದ್ರ ರಾಜಕೀಯ ಸೇರ್ತಾರಂತೆ…

LK   ¦    Aug 12, 2017 10:47:30 AM (IST)
ನಟ ಉಪೇಂದ್ರ ರಾಜಕೀಯ ಸೇರ್ತಾರಂತೆ…

ಬೆಂಗಳೂರು: ಇದೀಗ ನಟ ಉಪೇಂದ್ರನ ಸುತ್ತಲೂ ರಾಜಕೀಯದ ಗಾಳಿಸುದ್ದಿಗಳು ಹರಡಿದ್ದು, ಭಾರೀ ದೊಡ್ಡಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದೆಡೆ ಬಿಜೆಪಿಗೆ ಸೇರ್ತಾರಂತೆ, ಮತ್ತೊಂದೆಡೆ ಸ್ವಂತ ಪಕ್ಷ ಕಟ್ತಾರಂತೆ ಎಂಬಂತಹ ಅಂತೆಕಂತೆಗಳ ಸುತ್ತಲೇ ಸುದ್ದಿಗಳು ಗಿರಕಿ ಹೊಡೆಯುತ್ತಿವೆ.ಆದರೆ ಈ ಕುರಿತಂತೆ ನಟ ಉಪೇಂದ್ರ ಮಾತ್ರ ಯಾವುದನ್ನೂ ಬಹಿರಂಗಪಡಿಸಿಲ್ಲ.ಇವತ್ತು ಪತ್ರಿಕಾಗೋಷ್ಠಿ ತಮ್ಮ ಮುಂದಿನ ನಡೆಯ ಕುರಿತಂತೆ ಮಾಹಿತಿ ನೀಡುವ ಸಾಧ್ಯತೆಯಿದೆ. ಅವರ ಆತ್ಮೀಯರ ಪ್ರಕಾರ ಅವರ ಒಲವು ಬಿಜೆಪಿ ಕಡೆಗಿದೆ ಎನ್ನಲಾಗುತ್ತಿದೆ. ಇದು ಎಷ್ಟು ಸತ್ಯ ಎಂಬುದು ಇವತ್ತು ಅವರು ಬಹಿರಂಗಪಡಿಸಲಿರುವ ಮಾತುಗಳು ಹೇಳಲಿವೆ.ಸದ್ಯಕ್ಕಂತು ಅವರ ಸುತ್ತ ಅಂತೆಕಂತೆಗಳೇ ಹರಿದಾಡುತ್ತಿವೆ. ಈಗಾಗಲೇ ಅವರ ಪತ್ನಿ ಪ್ರಿಯಾಂಕ ಅವರು ಪತಿ ಉಪೇಂದ್ರ ಅವರು ರಾಜಕೀಯಕ್ಕೆ ಸೇರುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಅವರು ಕೂಡ ಯಾವ ಪಕ್ಷ ಎಂಬುದನ್ನು ಹೇಳಿಲ್ಲ. ಹೀಗಾಗಿ ಎಲ್ಲರೂ ಉಪೇಂದ್ರ ಅವರ ಮುಂದಿನ ನಡೆಯನ್ನು ತುಂಬಾ ಕಾತರದಿಂದ ಕಾಯುತ್ತಿದ್ದಾರೆ.

ಈಗಾಗಲೇ ತಮಿಳುನಾಡಿನ ಸೂಪರ್ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಸುದ್ದಿಗಳಿರುವ ಬೆನ್ನಲ್ಲೇ ಕರ್ನಾಟಕದಿಂದ ರಿಯಲ್ ಸ್ಟಾರ್ ಉಪೇಂದ್ರ ಅವರ ಹಾದಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ.ಹಾಗೆ ನೋಡಿದರೆ ಈ ಹಿಂದೆಯೂ ಉಪೇಂದ್ರ ರಾಜಕೀಯ ಬರುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ ಈ ಬಗ್ಗೆ ಅವರು ಅಲ್ಲಗಳೆದಿದ್ದರು. ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಾಗುತ್ತಿರುವ ಭ್ರಷ್ಟಾಚಾರ ಹಾಗೂ ರಾಜಕಾರಣದ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದಿದ್ದರು. ಅವರ ಕನಸುಗಳು ಬಹಳಷ್ಟು ಇವೆ. ಆದರೆ ಅದೆಲ್ಲವನ್ನು ರಾಜಕೀಯಕ್ಕೆ ಬಂದ ತಕ್ಷಣಕ್ಕೆ ಮಾಡಲು ಸಾಧ್ಯನಾ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ.ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದಾಗ ಅವರಿಗೆ ಬೆಂಬಲವನ್ನು ಸೂಚಿಸಿದ್ದ ಉಪೇಂದ್ರ ಬೆಂಬಲ ನೀಡಿದ್ದರು. ಆಗಲೇ ರಾಜಕೀಯಕ್ಕೆ ಬರುತ್ತಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಮತ್ತೆ ತಣ್ಣಗಾಯಿತು.

ಉಪೇಂದ್ರ ಅವರಲ್ಲಿ ಏನೋ ಬದಲಾವಣೆ ತರಬೇಕೆಂಬ ತುಡಿತವಿದೆ. ಅದು ಸಾಕಾರಗೊಳ್ಳಬೇಕಾದರೆ ರಾಜಕೀಯಕ್ಕೆ ಬರಬೇಕು ಅಧಿಕಾರ ದೊರೆಯಬೇಕು ಆಗ ಮಾತ್ರ ಸಾಧ್ಯ ಎಂಬುದು ಕೂಡ ಅವರಿಗೆ ತಿಳಿದಿದೆ. ಹೀಗಾಗಿಯೇ ಅವರು ಇದೀಗ ರಾಜಕೀಯದತ್ತ ಆಸಕ್ತಿ ತೋರಿಸಿದ್ದಾರೆ ಎಂದರೆ ತಪ್ಪಾಗಲಾರದು.ತಮ್ಮ ಸೂಪರ್, ಟೋಪಿವಾಲ, ಓಂಕಾರ ಚಿತ್ರಗಳಲ್ಲಿ ನಮ್ಮ ರಾಜಕಾರಣಿಗಳು ವಿದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ಬಗ್ಗೆ ವಿಷಯದ ಬಗ್ಗೆ ಹಾಗೂ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ನೀರಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಮೂಲಕ ಗಮನ ಸೆಳೆದಿದ್ದರು. ಆದರೆ ರಾಜಕೀಯ ಕ್ಷೇತ್ರವೇ ಬೇರೆ ಸಿನಿಮಾವೇ ಬೇರೆ ಉಪೇಂದ್ರ ಎರಡನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.