ನಂಜನಗೂಡಿನಲ್ಲಿ ಚಟ ಸಿನಿಮಾದ ಚಿತ್ರೀಕರಣ ಆರಂಭ

ನಂಜನಗೂಡಿನಲ್ಲಿ ಚಟ ಸಿನಿಮಾದ ಚಿತ್ರೀಕರಣ ಆರಂಭ

LK   ¦    Oct 22, 2017 11:42:59 AM (IST)
ನಂಜನಗೂಡಿನಲ್ಲಿ ಚಟ ಸಿನಿಮಾದ ಚಿತ್ರೀಕರಣ ಆರಂಭ

ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಸಿನಿಮಾಗಳು ಬರುತ್ತಲೇ ಇವೆ. ಕೆಲವರು ಸಿನಿಮಾ ಮಾಡಿ ಕೈ ಸುಟ್ಟುಕೊಂಡರೂ ಸಿನಿಮಾ ನಿರ್ಮಾಣದ ಸಾಹಸವನ್ನು ಮಾತ್ರ ಕೈಬಿಟ್ಟಿಲ್ಲ. ಈ ನಡುವೆ ಸಿನಿಮಾರಂಗದಲ್ಲಿ ಹಲವು ಹೊಸ ಮುಖಗಳು ಕಾಣಿಸಿಕೊಳ್ಳತೊಡಗಿದ್ದು, ಅದೃಷ್ಟದ ಪರೀಕ್ಷೆಯಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ.

ಪ್ರೀತಿ, ಪ್ರೇಮ, ಕ್ರೈಂ, ರೌಡಿಶಂ ಹೀಗೆ ಯಾವುದಾದರೊಂದು ಕಥಾವಸ್ತುವನ್ನಿಟ್ಟುಕೊಂಡು ಸಿನಿಮಾ ತೆಗೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡುವ ಸಿನಿಮಾ ಮಾಡಬೇಕೆಂದು ಹೊರಡುವವರು ಇಲ್ಲದಿಲ್ಲ. ಈ ಸಾಲಿಗೆ ಪಾಂಡವಪುರ ಚೆರ್ರಿರವರ ನಿರ್ಮಾಣದಲ್ಲಿ ಮೈಸೂರು ಕೃಷ್ಣ ನಿರ್ದೇಶಿಸುತ್ತಿರುವ ಚಟ ಸಿನಿಮಾ ಸೇರಿದೆ.

ಸಮಾಜದಲ್ಲಿ ಕಂಡು ಬರುತ್ತಿರುವ ದುಶ್ಚಟದ ಬೆನ್ನತ್ತಿ ಹೋಗುವ ಯುವ ಸಮುದಾಯ ಮತ್ತು ಅದರ ಸುತ್ತಲಿನ ಸಂಕಷ್ಟಗಳ ಬಗ್ಗೆ ಹೇಳಲು ಹೊರಟಿರುವ ನಿರ್ದೇಶಕ ಮೈಸೂರು ಕೃಷ್ಣ ಅವರು ಏನಾದರೊಂದು ಹೊಸತನ್ನು ಸ್ಯಾಂಡಲ್ ವುಡ್ ಗೆ ನೀಡುವ ತವಕದಲ್ಲಿದ್ದಾರೆ.

ಚಟ ಚಿತ್ರದ ಚಿತ್ರೀಕರಣಕ್ಕೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ಈಗಾಗಲೇ ವರುಣಾ ವಸತಿ ಜಾಗೃತಿ ಸಮಿತಿ ಅಧ್ಯಕ್ಷರಾದ ಡಾ. ಎಸ್.ಯತೀಂದ್ರ ಸಿದ್ದರಾಮಯ್ಯ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಇಂದಿನ ಯುವ ಜನತೆ ಹಲವಾರು ಚಟಗಳಿಗೆ ಬಲಿಯಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಇವೆಲ್ಲದರ ವಿರುದ್ದ ಹೋರಾಡುವಂತಹ, ಜನರಲ್ಲಿ ಜಾಗೃತಿ ಮೂಡಿಸುವಂತಹ ಚಲನಚಿತ್ರಗಳು ಹೆಚ್ಚು ಹೆಚ್ಚು ಬರಬೇಕು.

ಇಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರ ಜೊತೆಗೆ ಯುವ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ, ಆದ್ದರಿಂದ ಚಲನಚಿತ್ರಗಳು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವಂತಿದ್ದು, ಜನತೆಯಲ್ಲಿ ಜಾಗೃತಿ ಮೂಡಿಸಬೇಕೆಂದು ಆಶಿಸುತ್ತಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಚಿತ್ರದಲ್ಲಿ ನಾಯಕ ನಟನಾಗಿ ಮಹೇಶ್ ನಟಿಸುತ್ತಿದ್ದರೆ, ನಿರ್ದೇಶಕ ಮೈಸೂರು ಕೃಷ್ಣರವರದ್ದಾಗಿದೆ ಪಾಂಡವಪುರ ಚೆರ್ರಿ ನಿರ್ಮಾಣದ ಹೊರೆ ಹೊತ್ತಿದ್ದಾರೆ. ಚಿತ್ರೀಕರಣ ಮೈಸೂರು ಸುತ್ತಮುತ್ತ ನಡೆಯುತ್ತಿದೆ.