ಸರ್ಕಾರಿ, ಅನುದಾನಿತ ಶಾಲೆಗಳಿಗೆ ಜಿಐಎಸ್ ಮ್ಯಾಪಿಂಗ್: ತನ್ವೀರ್ ಸೇಠ್

ಸರ್ಕಾರಿ, ಅನುದಾನಿತ ಶಾಲೆಗಳಿಗೆ ಜಿಐಎಸ್ ಮ್ಯಾಪಿಂಗ್: ತನ್ವೀರ್ ಸೇಠ್

Jun 17, 2017 03:25:11 PM (IST)

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಜಿಐಎಸ್ ಮ್ಯಾಪಿಂಗ್ (ಭೌಗೋಳಿಕ ಮಾಹಿತಿ ವ್ಯವಸ್ಥೆಗೆ ಜೋಡಣೆ) ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

ಸರ್ಕಾರಿ ಮತ್ತು ಅನುದಾನಿತ ಸೇರಿ 76 ಸಾವಿರ ಶಾಲೆಗಳಿವೆ. ಸರ್ಕಾರ ಪ್ರತಿ ವರ್ಷವೂ ಶಾಲೆಗಳ ನಿರ್ವಹಣಾ ವೆಚ್ಚ ಬಿಡುಗಡೆ ಮಾಡುತ್ತದೆ. ಆದರೆ, ಆ ಹಣದಿಂದ ಯಾವ ಕೆಲಸಗಳನ್ನು ಮಾಡಲಾಗಿದೆ ಎಂಬುದೇ ತಿಳಿಯುವುದಿಲ್ಲ. ಹಲವೆಡೆ ಹಣ ದುರ್ಬಳಕೆ ಮಾಡಿಕೊಂಡಿರುವುದೂ ವರದಿ ಆಗುತ್ತಿದೆ. ಈ ಬಗ್ಗೆ ನಿಗಾ ವಹಿಸಲು ಜಿಐಎಸ್ ಮ್ಯಾಪಿಂಗ್ ಸಹಕಾರಿ ಆಗಲಿದೆ ಎಂದು ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರತಿ ಶಾಲೆಯಲ್ಲಿನ ಒಟ್ಟು ಕೊಠಡಿಗಳು, ಪ್ರಯೋಗಾಲಯ, ಬಿಸಿಯೂಟದ ಅಡುಗೆ ಮನೆ, ಶೌಚಾಲಯ, ಕಾಂಪೌಂಡ್, ಆಟದ ಮೈದಾನ, ದೈಹಿಕ ಶಿಕ್ಷಣ ಪರಿಕರಗಳು ಸೇರಿ ಶಾಲೆಯಲ್ಲಿನ ಎಲ್ಲ ಸೌಲಭ್ಯಗಳ ಭಾವಚಿತ್ರಗಳನ್ನು ಒಂದು ಬಾರಿ ಅಪ್ಲೋಡ್ ಮಾಡಬೇಕು ಎಂದು ಹೇಳಿದರು.

ಬಯೋಮೆಟ್ರಿಕ್ ಹಾಜರಾತಿ: ‘ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮುಂದಿನ ಎರಡು ತಿಂಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಇದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ ಜೊತೆ ಜೋಡಣೆ ಮಾಡಲಾಗುವುದು. ರಾಜ್ಯದ ಯಾವುದೇ ಶಾಲೆಯ ಶಿಕ್ಷಕನ ಹಾಜರಾತಿ ಇಲ್ಲಿ ಸಿಗುತ್ತದೆ. ಪೋಷಕರು ಸಹ ಅವರ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಗಳ ಶಿಕ್ಷಕರ ಹಾಜರಾತಿ ಗಮನಿಸಬಹುದು. ವೇತನ ಪಾವತಿಸುವುದಕ್ಕೂ ಇದು ಸಹಕಾರಿ’ಎಂದು ತನ್ವೀರ್ ಸೇಠ್ ವಿವರಿಸಿದರು.
ಈ ಸಂಬಂಧ ಗೂಗಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಶಾಲೆಗಳ ಸ್ಥಿತಿಗತಿಯ ಚಿತ್ರಣ ಸಿಗುತ್ತದೆ ಎಂದು ಅವರು ಹೇಳಿದರು.