ರಾಜ್ಯದಲ್ಲಿ ದುರ್ಬಲವಾದ ಮುಂಗಾರು

ರಾಜ್ಯದಲ್ಲಿ ದುರ್ಬಲವಾದ ಮುಂಗಾರು

Jun 19, 2017 11:53:21 AM (IST)

ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೆ ರಾಜ್ಯದ ಹಲವೆಡೆ ಮಳೆ ಸುರಿಯುವುದರೊಂದಿಗೆ ಆಶಾಭಾವನೆ ಮೂಡಿಸಿತ್ತಾದರೂ ಇದೀಗ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುರಿಯುತ್ತಿರುವುದನ್ನು ಹೊರತು ಪಡಿಸಿದರೆ ಮುಂಗಾರು ದುರ್ಬಲಗೊಂಡಿರುವುದು ಕಂಡು ಬಂದಿದೆ.

ಈ ಬಾರಿ ಉತ್ತಮ ಮಳೆಯಾಗಬಹುದೆಂಬ ನೀರಿಕ್ಷೆ ಸದ್ಯ ಹುಸಿಯಾಗಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಚದುರಿದಂತೆ ಆಗಾಗ್ಗೆ ಮಳೆಯಾಗುತ್ತಿದ್ದರೂ ನಿರೀಕ್ಷಿತ ಮಳೆ ಇನ್ನೂ ಸುರಿದಿಲ್ಲ.  ಹೀಗಾಗಿ ಸ್ವಲ್ಪ ಆತಂಕವೂ ಜನತೆಯನ್ನು ಕಾಡುತ್ತಿದೆ. ಕೊಡಗಿನಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಬೀಳುತ್ತಿರುವುದರಿಂದ ತಳ ಕಂಡಿದ್ದ ಕೆಆರ್ ಎಸ್ ನಲ್ಲಿ ಸ್ವಲ್ಪ ಚೇತರಿಕೆಯಾಗಿದೆ. ಕೆಆರ್ ಎಸ್ ನಲ್ಲಿ ಕಳೆದ ವರ್ಷಕ್ಕಿಂತ ಎರಡು ಟಿಎಂಸಿಯಡಿ ನೀರು ಕಡಿಮೆ ಇದೆ. ಕಳೆದ ವರ್ಷ 73.46 ಅಡಿಯಷ್ಟು ನೀರಿನ ಸಂಗ್ರಹವಿತ್ತು. ಪ್ರಸ್ತುತ 67.86 ಅಡಿಯಷ್ಟು ಮಾತ್ರ ನೀರಿದೆ ಆದರೂ ಮುಂದಿನ ದಿನಗಳಲ್ಲಿ ಒಳ ಹರಿವಿನ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆಯಿದೆ.

ಕರ್ನಾಟಕ ನೈಸರ್ಗಿಕ ವಿಕೋಪ  ಉಸ್ತುವಾರಿ ಕೇಂದ್ರ ನೀಡಿದ ಮಾಹಿತಿ ಪ್ರಕಾರ ರಾಜ್ಯದ ಸರಾಸರಿ  1155ಮಿ.ಮೀ. ವಾಡಿಕೆ ಮಳೆಗೆ ಕಳೆದ ವರ್ಷ 831 ಮಿ.ಮೀ. ನಷ್ಟು ಮಳೆಯಾಗಿದ್ದು, ಶೇ.28ರಷ್ಟು ಮಳೆ ಕೊರತೆಯಾಗಿ ರಾಜ್ಯ ಬರದ ಛಾಯೆಗೆ ಸಿಲುಕಿತ್ತು. ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 129 ಮಿ.ಮೀ. ಇದ್ದು 126 ಮಿ.ಮೀ.ನಷ್ಟು ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆ ಎಲ್ಲರದ್ದಾಗಿದೆ