ಸಚಿವ ಸ್ಥಾನಗಳಿಗಾಗಿ ಲಾಬಿ ಆರಂಭ!

ಸಚಿವ ಸ್ಥಾನಗಳಿಗಾಗಿ ಲಾಬಿ ಆರಂಭ!

Jun 19, 2017 12:47:56 PM (IST)

ಬೆಂಗಳೂರು: ವಿಧಾನ ಮಂಡಲದ ಅಧಿವೇಶನ ಮುಗಿಯಲು ದಿನಗಣನೆ ಆರಂಭವಾಗುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಮತ್ತೆ ಗರಿಗೆದರಿದ್ದು ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಲಾಭಿ ಆರಂಭಿಸಿದೆ ಎನ್ನಲಾಗಿದೆ. ತಮ್ಮ ಘಾಡ್ ಫಾದರ್ಗಳ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಸರತ್ತು ಶುರುವಾಗಿದೆ.

Cabinet reshuffle: CM to play it safe?-1ಸದ್ಯಕ್ಕೆ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿವೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರಾದರೂ ಅಂಗೀಕಾರವಾಗಿಲ್ಲ. ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸುವ ಸಾಧ್ಯತೆಯಿದೆ. ಇದು ಸೇರಿದಂತೆ ರಾಜ್ಯದ ಸಚಿವ ಸಂಪುಟದಲ್ಲಿ ಒಟ್ಟು ಮೂರು ಸ್ಥಾನಗಳು ಖಾಲಿಯಿದ್ದು ಇದೀಗ ಕಸರತ್ತು ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ.

ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಸಭೆ ನಡೆಸಿ ತೀರ್ಮಾನ ಕೈಗೊಂಡರೂ ಅಂತಿಮವಾಗಿ ಹೈಕಮಾಂಡ್ ತೀರ್ಮಾನವೇ ನಡೆಯಲಿರುವುದರಿಂದ ಹೆಚ್ಚಿನವರು ದೆಹಲಿಯತ್ತ ಮುಖ ಮಾಡಿದ್ದಾರೆ. ಇದುವರೆಗೆ ಶಾಸಕರಾಗಿದ್ದವರಿಗೆ ಸಚಿವರಾಗುವ ಹಂಬಲವಾಗಿದ್ದು ತಮ್ಮ ಜೀವಿತಾವಧಿಯಲ್ಲೊಮ್ಮೆ ಸಚಿವರಾಗಿಯೇ ತೀರಬೇಕೆನ್ನುವ ಹಠವೂ ಇದೆ. ಕರ್ನಾಟಕದ ಮಟ್ಟಿಗೆ ದೆಹಲಿಯಲ್ಲಿ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಭಾವಿಯಾಗಿದ್ದು, ಅವರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ತರುವ ಯತ್ನವನ್ನು ಮಾಜಿ ಸಚಿವೆ ಮೋಟಮ್ಮ, ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಅವರು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ ,  ಶಾಸಕರಾದ ಶಿವಮೂರ್ತಿ ನಾಯಕ್, ಷಡಕ್ಷರಿ, ಎಂ.ಪಿ.ನರೇಂದ್ರ ಸ್ವಾಮಿ, ಕೆ.ಎನ್.ರಾಜಣ್ಣ  ಮೊದಲಾದವರಿಗೂ ಸಚಿವರಾಗುವ ಬಯಕೆ ಚಿಗುರಿದೆ. ಇಷ್ಟೆ ಅಲ್ಲದೆ ಇನ್ನು ಹಲವು ಶಾಸಕರು ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು, ತಮ್ಮ ಮೂಲಕ ಏನೆಲ್ಲ ಪ್ರಯತ್ನ ಮಾಡಬಹುದೋ ಅದೆಲ್ಲವನ್ನು ಮಾಡುತ್ತಿದ್ದಾರೆ.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಹೊಸ ಹುರುಪಿನೊಂದಿಗೆ ಮುನ್ನುಗ್ಗುವಂತಾಗಬೇಕು.ಇದೇ ಕಾರಣಕ್ಕಾಗಿ ಸಚಿವ ಸಂಪುಟವನ್ನು ಪುನರ್ರಚಿಸಿ ಹತ್ತು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸವಾದರೆ ಸಂಘಟನೆಗೆ ಪುನಃ ಚುರುಕು ಮುಟ್ಟಿಸುವ ನಿರ್ಧಾರವನ್ನು ರಾಜ್ಯ ನಾಯಕರು ಮಾಡುತ್ತಿದ್ದಾರೆ. ಆದರೆ ಸಂಪುಟ ವಿಸ್ತರಣೆ ಮಾಡಿದರೆ ಒಂದಷ್ಟು ಗೊಂದಲ, ಅತೃಪ್ತಿ ಕಾಣುವುದು ಬಹುತೇಕ ಖಚಿತವಾಗಿರುವಾಗ ಸಂಪುಟ ಪುನರ್ರಚನೆ ಮಾಡಿ ತೊಂದರೆ ಮೈಮೇಲೆ ಎಳೆದುಕೊಳ್ಳುವುದಕ್ಕೆ ಹೈಕಮಾಂಡ್ ಮುಂದೆ ಬಾರದು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಯಾವ ರೀತಿಯಲ್ಲಿ ನಿಭಾಯಿಸುತ್ತಾರೆ ಎನ್ನುವುದೇ ಕುತೂಹಲಕಾರಿಯಾಗಿದೆ.