ಮಾಧ್ಯಮಗಳ ಧೋರಣೆ ಬದಲಾಗಬೇಕು: ಆಂಜನೇಯ

ಮಾಧ್ಯಮಗಳ ಧೋರಣೆ ಬದಲಾಗಬೇಕು: ಆಂಜನೇಯ

Aug 11, 2017 01:14:13 PM (IST)
ಮಾಧ್ಯಮಗಳ ಧೋರಣೆ ಬದಲಾಗಬೇಕು: ಆಂಜನೇಯ

ಬೆಂಗಳೂರು: ಮಾಧ್ಯಮಗಳು ಸಾಗುತ್ತಿರುವ ಹಾದಿ ತಪ್ಪುತ್ತಿದ್ದು, ತಮ್ಮ ಧೋರಣೆ ಬದಲಾಯಿಸಿಕೊಂಡು ಸತ್ಯನಿಷ್ಠ ವರದಿ ಮಾಡಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಎಸ್ಸಿ -ಎಸ್ಟಿ ಸಂಪಾದಕರ ಸಂಘ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಇಂದಿನ ಪತ್ರಿಕೋದ್ಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೆ, ಇತ್ತೀಚಿಗೆ ಮಾಧ್ಯಮಗಳ ಮೇಲೆ ಅನುಮಾನ ಬರುತ್ತಿದೆ. ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇಂತಹ ಧೋರಣೆಗಳು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ. ಆದ್ದರಿಂದ ಪತ್ರಕರ್ತರು ಸತ್ಯನಿಷ್ಠ ವರದಿಗಳನ್ನು ಪ್ರಕಟ ಮಾಡಿ ಸಾಮಾಜಿಕ ಕಳಕಳಿಯನ್ನು ಪ್ರದಶರ್ಿಸಬೇಕಾದ ಅಗತ್ಯತೆ ಇರುವುದಾಗಿ ಹೇಳಿದರು.

ಈ ಹಿಂದೆ ಪತ್ರಿಕೆ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿದ್ದವು. ಖಾದ್ರಿ ಶಾಮಣ್ಣ ಅವರಂತಹ ಘಟಾನುಘಟಿ ಪತ್ರಕರ್ತರು ಸಮಾಜ ತಿದ್ದುವ ಕೆಲಸ ಮಾಡಿಕೊಂಡು ಬಂದಿದ್ದರು. ಈಗ ಎಲ್ಲ ಮಾಧ್ಯಮಗಳು ಹಾದಿ ತಪ್ಪುತ್ತಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದರು. ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾರಂಗ ಸತ್ಯನಿಷ್ಠ ವರದಿ ಮಾಡುತ್ತಿಲ್ಲ. ಗುಜರಾತಿನಲ್ಲಿ ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿ ಅಹಮದ್ ಪಟೇಲ್ರನ್ನು ಸೋಲಿಸಲು ಬಿಜೆಪಿ ಏನೆಲ್ಲ ಆಮಿಷ ಒಡ್ಡಿತು. ಏನೆಲ್ಲ ತಂತ್ರ ಮಾಡಿತು. ಆದರೂ ಅವರು ಗೆದ್ದರು. ಆದರೆ ಪ್ರಮುಖ ಮಾಧ್ಯಮಗಳು ಮೋದಿಗೆ ಮುಖಭಂಗ ಎಂಬ ಸುದ್ದಿಯನ್ನೇ ಮಾಡಲಿಲ್ಲ. ಇದು ಇವತ್ತಿನ ಮಾಧ್ಯಮಗಳ ನೀತಿಯೇ ಎಂದು ಪ್ರಶ್ನಿಸಿದರು.

ಈಗ ಬುದ್ದಿವಂತ ಪತ್ರಿಕೋದ್ಯಮಿಗಳು ಮಾಧ್ಯಮದವರು ಕೇಳಿದಷ್ಟು ಸಂಬಳ ಕೊಟ್ಟು ಖರೀದಿ ಮಾಡುತ್ತಿದ್ದಾರೆ ಹೀಗಾಗಿ ಮಾಧ್ಯಮದಲ್ಲೂ ವಿಫುಲ ಅವಕಾಶಗಳಿವೆ. ಇಂತಹ ಅವಕಾಶವನ್ನು ದಲಿತ ಪತ್ರಕರ್ತರು ಬಳಕೆ ಮಾಡಿಕೊಂಡು ಉತ್ತಮ ಬರಹಗಾರರಾಗಬೇಕೆಂದು ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದವರಿಗೂ ಸಮಾನವಾದ ಅವಕಾಶ ಕೊಟ್ಟಿದೆ. ಪತ್ರಕರ್ತರಿಗೂ ಎಲ್ಲ ಅವಕಾಶ ನೀಡಿದೆ. ನಮ್ಮ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಮುಂದೆ ಸಹ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಹಾಗೆ ಪತ್ರಕರ್ತರು ಬರವಣಿಗೆ ಮೂಲಕ ಹುರಿದುಂಬಿಸಬೇಕೆಂದು ಇದೇ ವೇಳೆ ಆಂಜನೇಯ ನಗೆ ಚಟಾಕಿ ಹಾರಿಸಿದರು.

ಇದೇ ವೇಳೆ ಕೆಲ ಹಿರಿಯ ಪತ್ರಕರ್ತರಿಗೆ ಬಿ.ರಾಚಯ್ಯ ವಾರ್ಷಿಕ ಸ್ಮರಣ ಪ್ರಶಸ್ತಿ ಪ್ರದಾನ ಮಾಡಲಾಯಿತು.