ಅಮಿತ್ ಷಾಗೆ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ?

ಅಮಿತ್ ಷಾಗೆ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ?

HSA   ¦    Dec 05, 2017 07:48:36 PM (IST)
ಅಮಿತ್ ಷಾಗೆ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ?

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಾ ಇದ್ದಂತೆ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಹಲವಾರು ದಾರಿಗಳನ್ನು ಹುಡುಕುತ್ತಿದ್ದು, ಇದರ ಒಂದು ಭಾಗವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಕರ್ನಾಟಕಕ್ಕೆ ಬರದಿರುವಂತೆ ನಿರ್ಬಂಧ ಹೇರಲು ಚಿಂತನೆ ನಡೆಸುತ್ತಿದೆ.

ಹುಣಸೂರಿನಲ್ಲಿ ನಡೆದ ಗಲಭೆ, ಗುಜರಾತ್ ನಲ್ಲಿ ನಡೆದಿರುವ ಕೋಮುಗಲಭೆ ಹಾಗೂ ಎನ್ ಕೌಂಟರ್ ಸಹಿತ ಹಲವಾರು ಗಲಭೆಗಳಲ್ಲಿ ಅಮಿತ್ ಷಾ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಅಮಿತ್ ಷಾಗೆ ರಾಜ್ಯಕ್ಕೆ ಬರದಂತೆ ನಿರ್ಬಂಧ ಹೇರಲು ಲೆಕ್ಕಾಚಾರದಲ್ಲಿ ತೊಡಗಿದೆ.

ಹಿಂದೆ ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಅವರಿಗೆ ಮಂಗಳೂರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಅದೇ ರೀತಿ ಈಗ ಅಮಿತ್ ಷಾಗೆ ಕೂಡ ಕರ್ನಾಟಕ ಪ್ರವೇಶ ಮಾಡದಂತೆ ನಿಷೇಧ ಹೇರಲು ಸಿದ್ದರಾಮಯ್ಯ ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮಂಗಳವಾರ ವಿಧಾನಸಭೆಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಪರಿಷತ್ ಸದಸ್ಯ ಉಗ್ರಪ್ಪ ಅವರು, ಪ್ರತಾಪ್ ಸಿಂಹ ಪ್ರಕರಣ, ಗುಜರಾತ್ ಕೋಮುಗಲಾಟೆ ಮತ್ತು ತೊಗಾಡಿಯಾ ಪ್ರಕರಣವನ್ನು ಉಲ್ಲೇಖಿಸಿರುವುದು ಕಾಂಗ್ರೆಸ್ ನ ಆಲೋಚನೆಯನ್ನು ಹೊರಹಾಕಿದಂತಿತ್ತು.

ಸಿದ್ದರಾಮಯ್ಯ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ತಡೆಯಲು ರಾಜ್ಯದಲ್ಲಿ ದೊಂಬಿ, ಗಲಭೆ ಸೃಷ್ಟಿಸಲು ಅಮಿತ್ ಷಾ ಪ್ರಯತ್ನಿಸುತ್ತಿದ್ದಾರೆ. ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಮುಂದಾಗಿದ್ದಾರೆ ಎಂದರು.

ಅಮಿತ್ ಷಾ ರಾಜ್ಯ ಪ್ರವೇಶಕ್ಕೆ ನಿಷೇಧ ಹೇರುತ್ತೀರಾ ಎಂದು ಕೇಳಿದಾಗ, ತೊಗಾಡಿಯಾ ಪ್ರಕರಣದಲ್ಲಿ ಕೋಮು ಸೌಹಾರ್ದ ಕದಡುವ ವ್ಯಕ್ತಿಗಳಿಗೆ ಪ್ರವೇಶ ನೀಡುವ ನಿರ್ಧಾರವನ್ನು ಸುಪ್ರೀಂಕೋರ್ಟ್ ಜಿಲ್ಲಾಡಳಿತಕ್ಕೆ ನೀಡಿದೆ ಎಂದು ಹೇಳಿದರು.