ಗಾಂಜಾ ಮಾರುತ್ತಿದ್ದ ಐದು ಮಂದಿ ಉತ್ತರ ಭಾರತೀಯರ ಸೆರೆ

ಗಾಂಜಾ ಮಾರುತ್ತಿದ್ದ ಐದು ಮಂದಿ ಉತ್ತರ ಭಾರತೀಯರ ಸೆರೆ

Nov 14, 2017 05:32:05 PM (IST)
ಗಾಂಜಾ ಮಾರುತ್ತಿದ್ದ ಐದು ಮಂದಿ ಉತ್ತರ ಭಾರತೀಯರ ಸೆರೆ

ಬೆಂಗಳೂರು: ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮಡಿವಾಳ ಕೆರೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬಂಧಿಸಿ ಸುಮಾರು 7.25 ಕೆ.ಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮೈಕೋ ಲೇ ಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಡಿವಾಳ ಕೆರೆಯ ಬಳಿ ಗಾಂಜಾ ಮಾರಾಟ ನಡೆಸುತ್ತಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಉತ್ತರ ಪ್ರದೇಶ ಮೂಲದವರು ಮತ್ತು ಮೂರು ಮಂದಿ ಬಿಹಾರದವರೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಬಂಧಿತರನ್ನು ಬಿಹಾರದವರಾದ ರಾಹುಲ್ ಕುಮಾರ್ ಯಾದವ್, ರಾಮ್ ದೀನ್ ಜಾಧವ್, ಶ್ಯಾಮ್ ಕುಮಾರ್ ಯಾದವ್, ಉತ್ತರ ಪ್ರದೇಶದ ದಾನೇಶ್ ಯಾನೆ ನಯಿಮುದ್ದೀನ್ ಮತ್ತು ಶಬ್ಬು ಯಾನೆ ಅನೀಷ್ ಎಂದು ಗುರುತಿಸಲಾಗಿದೆ.

ರಾಹುಲ್ ಎಂಬಾತ ಸಿಂಗಸಂದ್ರದ ದಿಲೀಪ್ ಎಂಬ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡಿ ಅದನ್ನು ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಕೇರಳದ ಇಬ್ಬರ ಸೆರೆ
ಮತ್ತೊಂದು ದಾಳಿಯಲ್ಲಿ ಗಾಂಜಾ ಮತ್ತು ಚರಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಸುಮಾರು 15 ಕೆಜಿ ಗಾಂಜಾ ಮತ್ತು 100 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕೇರಳ ಕಣ್ಣೂರಿನ ಮಹಮ್ಮದ್ ಅಶ್ರಫ್ ಯಾನೆ ಅಬ್ದುಲ್ ಅಸೀಸ್ ಮತ್ತು ರಾಜೇಶ್ ಯಾನೆ ರಾಜನ್ ಎಂದು ಗುರುತಿಸಲಾಗಿದೆ.

More Images