ಜೆಡಿಎಸ್ ನ ಬಂಡಾಯ ಶಾಸಕರ ನಡೆ ನಿಗೂಢ!

ಜೆಡಿಎಸ್ ನ ಬಂಡಾಯ ಶಾಸಕರ ನಡೆ ನಿಗೂಢ!

LK   ¦    Jun 16, 2017 02:58:23 PM (IST)

ಬೆಂಗಳೂರು: ಜೆಡಿಎಸ್ ನಿಂದ ಬಂಡಾಯ ಎದ್ದು ಹೊರ ಹೋಗಿರುವ ಶಾಸಕರು ಈಗ ಅತಂತ್ರರಾಗಿರುವುದಂತು ಸತ್ಯ. ಈಗಾಲೂ ಜೆಡಿಎಸ್ ನಲ್ಲೇ ಇದ್ದೇವೆ ಎನ್ನುತ್ತಾ ದಿನಕಳೆಯುತ್ತಿರುವ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆಯ ಭಾರವನ್ನು ಜನರ ಮೇಲೆ ಹೊರಲು ತಯಾರಿಲ್ಲ ಎನ್ನುತ್ತಲೇ ಅವಧಿ ಪೂರೈಸುವ ತೀರ್ಮಾನ ಕೈಗೊಂಡಂತೆ ಕಂಡು ಬರುತ್ತಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧವೇ ತಿರುಗಿ ಬಿದ್ದು, ಪಕ್ಷದ ಚಟುವಟಿಕೆಯಿಂದ ಮಾನಸಿಕವಾಗಿ ಹೊರಬಂದು ತಟಸ್ಥಗೊಂಡಿದ್ದಾರೆ ವಿನಃ ಪಕ್ಷಕ್ಕಾಗಲೀ, ತಮ್ಮ ಸ್ಥಾನಕ್ಕಾಗಲೀ ರಾಜೀನಾಮೆ ನೀಡಿಲ್ಲ. ಅಷ್ಟೇ ಅಲ್ಲ ಈ ಎಲ್ಲ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಒಂದು ವೇಳೆ ಆ ಪಕ್ಷದ ಕದ ತಟ್ಟಿದರೂ ಅಲ್ಲಿ ಟಿಕೆಟ್ ಸಿಗುತ್ತದೆ ಎಂಬ ಖಚಿತತೆ ಇಲ್ಲದಾಗಿದೆ. ಒಂದು ವೇಳೆ ನೀಡಿದರೂ ಆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಿರುಗಿ ಬೀಳುವ ಸಾಧ್ಯತೆ ಇಲ್ಲದಿಲ್ಲ.

ಬಂಡಾಯ ಶಾಸಕರಾದ ಚಲುವರಾಯ ಸ್ವಾಮಿ, ಜಮೀರ್ ಅಹಮದ್, ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ, ಭೀಮಾನಾಯಕ್, ರಮೇಶ್ ಬಂಡಿಸಿದ್ದೇಗೌಡ ಅವರ ಪೈಕಿ ಈ ಹಿಂದೆ ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಜಮೀರ್ಅಹ್ಮದ್ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ. ಚೆಲುವರಾಯಸ್ವಾಮಿ ಕೂಡ ಕಾಂಗ್ರೆಸ್ನತ್ತ ಒಲವು ತೋರಿದ್ದಾರೆ. ಇತ್ತೀಚೆಗಿನ ಬೆಳವಣಿಗೆ ಪ್ರಕಾರ ಮತ್ತೊಬ್ಬ ಪ್ರಭಾವಿ ನಾಯಕ ಮಾಗಡಿ ಶಾಸಕ ಬಾಲಕೃಷ್ಣ ಅವರು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇವರ್ಯಾರು ಬಹಿರಂಗವಾಗಿ ತಮ್ಮ ನಿಲುವುಗಳನ್ನು ಪ್ರಕಟಿಸುತ್ತಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವುದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಮುಂದಿನ ಚುನಾವಣೆಯ ಸ್ಥಿತಿಗತಿ ನೋಡಿಕೊಂಡು ತಮ್ಮ ನಿರ್ಧಾರ ಪ್ರಕಟಿಸಬಹುದೇನೋ? ಆದರೆ ಇವರ ಬೆಂಬಲಿಗರನ್ನು ಅತಂತ್ರ ಸ್ಥಿತಿ ಕಾಡತೊಡಗಿದೆ.

ಈ ನಡುವೆ ಶಾಸಕ ಚೆಲುವರಾಯಸ್ವಾಮಿ ಮಾತನಾಡಿ ತನ್ನ ಕ್ಷೇತ್ರವಾದ ನಾಗಮಂಗಲದ ಅಭಿವೃದ್ಧಿ ವಿಚಾರದಲ್ಲಿ ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ಸಿಗರನ್ನು ಹೊಗಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದಿದ್ದಾರೆ. ದಲಿತರ ಮನೆಯಲ್ಲಿ ಉಪಹಾರ ಸೇವಿಸುತ್ತಿರುವುದು ಕೇವಲ ರಾಜಕೀಯದ ಗಿಮಿಕ್. ದಲಿತರು, ಹಿಂದುಳಿದ ವರ್ಗದವರು, ರೈತ ಕುಟುಂಬದವರು ರಾಜ್ಯದ ಬೆನ್ನೆಲುಬಾಗಿದ್ದು, ಅವರನ್ನು ಬೆಂಬಲಿಸಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಿಷ್ಠಗೊಳಿಸಲು ಮೂಲ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೇ ವಿನಃ ದಲಿತರ ಮನೆಯಲ್ಲಿ ವಾಸ್ತವ್ಯವಿದ್ದಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎಂದಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ತಾನು ಸೇರಿದಂತೆ ಹಲವರು ದಲಿತರ ಮನೆಯಲ್ಲಿ ವಾಸ್ತವ್ಯಹೂಡಿದ್ದು ಯಾವುದೇ ಬದಲಾವಣೆ ಆಗುವುದಿಲ್ಲ. ಇದರ ಬದಲು ಪ್ರತಿಯೊಬ್ಬರು  ಪೂರ್ಣಪ್ರಮಾಣದ ಸೌಲಭ್ಯಗಳನ್ನು ಕಲ್ಪಿಸಿದರೆ ಉತ್ತಮ. ಆದರೆ ಇದನ್ನು ಬಿಟ್ಟು ಅವರ ಮನೆಗೆ ಹೋಗಿ ಕಾಫಿ ಕುಡಿಯುವುದು, ತಿಂಡಿ ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದ್ದಾರೆ.

ಇನ್ನು ಇಕ್ಬಾಲ್ ಅನ್ಸಾರಿ ವಿರುದ್ಧ ಅವರ ಸಹೋದರರೇ ತಿರುಗಿ ಬಿದ್ದಿದ್ದು, ಅವರ ಮತ್ತು ನಟಿ ಪಂಚಮಿ ಸಂಬಂಧ ರಹಸ್ಯ ಬಯಲಾಗಿರುವುದು ಮುಂದಿನ ಅವರ ವರ್ಚಸ್ಸಿಗೆ ಧಕ್ಕೆಯಾದರೂ ಆಗಬಹುದು ಹೀಗಾಗಿ ಬಂಡಾಯ ಶಾಸಕರ ಮುಂದಿನ ಅಷ್ಟೊಂದು ಸುಗಮವಾಗಿದೆ ಎಂದು ಹೇಳಲು ಸಾಧ್ಯವಿಲ್ಲದಾಗಿದೆ. ಸದ್ಯ ಇವರೆಲ್ಲರೂ ಇತರೆ ಪಕ್ಷವನ್ನು ಮತ್ತು ಅದರ ನಾಯಕರನ್ನು ಟೀಕಿಸುತ್ತಾ ಸಾಗುತ್ತಿದ್ದರೂ ಇವರ ಮುಂದಿನ ನಡೆ ಏನು ಎಂಬುದು ಮಾತ್ರ ನಿಗೂಢವಾಗಿದ್ದು, ಚುನಾವಣೆ ತನಕ ಕಾದು ನೋಡಬೇಕಾಗಿದೆ.