ರಾಹುಲ್ ಗಾಂಧಿ-ಅಮಿತ್ ಶಾ ರಾಜ್ಯಕ್ಕೆ ದೌಡು

ರಾಹುಲ್ ಗಾಂಧಿ-ಅಮಿತ್ ಶಾ ರಾಜ್ಯಕ್ಕೆ ದೌಡು

LK   ¦    Aug 12, 2017 10:32:22 AM (IST)
ರಾಹುಲ್ ಗಾಂಧಿ-ಅಮಿತ್ ಶಾ ರಾಜ್ಯಕ್ಕೆ ದೌಡು

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಒಂದೆಡೆ ಕಾಂಗ್ರೆಸ್ ಮತ್ತೊಂದೆಡೆ ಬಿಜೆಪಿ ಕರ್ನಾಟಕದತ್ತ ದೃಷ್ಠಿ ನೆಟ್ಟಿದ್ದಾರೆ.ಕಾಂಗ್ರೆಸ್ಗೆ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳುವ ಸಂಕಟವಾದರೆ, ಬಿಜೆಪಿಗೆ ಅಧಿಕಾರ ಕಿತ್ತುಕೊಳ್ಳುವ ರಣೋತ್ಸಾಹ. ಇದರಿಂದಾಗಿ ಕೇಂದ್ರದ ನಾಯಕರಿಗೆ ಕರ್ನಾಟಕ ರಾಜಕೀಯ ಚದುರಂಗದ ವೇದಿಕೆಯಾಗಿ ಹೋಗಿದೆ.ಹೀಗಾಗಿ ಒಬ್ಬರಿಗಿಂತ ಒಬ್ಬರು ತಾವೇನು ಕಡಿಮೆಯಿಲ್ಲ ಎಂಬಂತೆ ಜಿದ್ದಾಜಿದ್ದಿಗೆ ಬಿದ್ದಿರುವುದು ಈಗಿನ ಸನ್ನಿವೇಶಗಳನ್ನು ಗಮನಿಸಿದಾಗ ನಮಗೆ ಅರಿವಾಗುತ್ತದೆ. ಇಂದು(ಶನಿವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬೆಂಗಳೂರಿಗೆ ಆಗಮಿಸಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿ ಮುಂದಿನ ರಾಜಕೀಯ ನಡೆಗಳ ಸಭೆ ನಡೆಸಿದರೆ, ಅತ್ತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯೂ ಆಗಮಿಸಲಿದ್ದು, ರಾಯಚೂರಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಆ ಮೂಲಕ ಶಕ್ತಿ ಪ್ರದರ್ಶನ ಮಾಡಿ ಮುಂದಿನ ಚುನಾವಣೆಗೆ ರಣಕಹಳೆ ಈಗಿನಿಂದಲೇ ಮೊಳಗಿಸಲಿದೆ. ರಾಜ್ಯಕ್ಕೆ ಆಗಮಿಸುವ ರಾಹುಲ್ ಗಾಂಧಿ ಅವರು ಚುನಾವಣಾ ತಯಾರಿಗೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶವದಲ್ಲಿ ಮಾತನಾಡಲಿದ್ದಾರೆ.

ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ಸೇಠ್ ಅವರು ಸಿದ್ದತೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಮುಖಂಡರಾದ ಆಸ್ಕರ್ ಫರ್ನಂಡೀಸ್, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು ಸೇರಿದಂತೆ 2ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಕಾಂಗ್ರೆಸ್ಸಿನದ್ದಾಗಿದೆ.ಇನ್ನು ಬಿಜೆಪಿಯಲ್ಲಿ ಎಷ್ಟೇ ತೇಪೆ ಹಾಕಿದರೂ ಬಿಜೆಪಿ ನಾಯಕರಲ್ಲಿರುವ ವೈಮನಸ್ಸು ಹೊರಗೆ ಕಾಣಿಸುತ್ತಲೇ ಇದೆ. ಇದಕ್ಕೆ ಯಾವ ರೀತಿಯ ಮುಲಾಮನ್ನು ಅಮಿತ್ ಶಾ ಹಾಕುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ರಾಜ್ಯಾಧ್ಯಕ್ಷ ಯಡಿಯೂರಪ್ಪ , ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ಪದಾಧಿಕಾರಿಗಳ ನೇಮಕಾತಿ ವಿಷಯದಲ್ಲಿ ಉಂಟಾಗಿದ್ದ ಭಿನ್ನಮತ ಶಮನವಾಗಿದೆ ಎಂದು ಹೇಳಲಾಗಿದ್ದರೂ ಆಂತರಿಕವಾಗಿ ಸಾಕಷ್ಟು ವ್ಯತ್ಯಾಸಗಳಿರುವುದು ಗುಟ್ಟಾಗಿ ಈಗಾಗಲೇ ಬಹಿರಂಗವಾಗಿಯೇ ಕಾಣಿಸಿಕೊಂಡಿದೆ. ಸದ್ಯ ಅಮಿತ್ ಶಾ ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ನವೋಲ್ಲಾಸ ತಂದಿದ್ದರೆ ಪ್ರಮುಖ ನಾಯಕರಿಗೆ ಒಂದು ರೀತಿಯ ಆತಂಕ ಶುರುವಾಗಿದೆ. ಮುಂದೆ ಎರಡು ಪಕ್ಷಗಳಲ್ಲಿ ಯಾವ ರೀತಿಯ ಸಂಚಲನ ಮೂಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ