ಸೀಗಡಿ ಗೋಡಂಬಿ ಮಿಕ್ಸ್ ರೆಸಿಪಿ

ಸೀಗಡಿ ಗೋಡಂಬಿ ಮಿಕ್ಸ್ ರೆಸಿಪಿ

LK   ¦    May 10, 2019 02:32:14 PM (IST)
ಸೀಗಡಿ ಗೋಡಂಬಿ ಮಿಕ್ಸ್ ರೆಸಿಪಿ

ಮಾಂಸಹಾರಿಗಳು ಬಾಯಿ ಚಪ್ಪರಿಸಿಕೊಂಡು ಸೇವಿಸಲು ನೂರಾರು ಖಾದ್ಯಗಳನ್ನು ತಯಾರಿಸಬಹುದಾಗಿದೆ. ಅದರಲ್ಲಿ ಒಂದು ಸೀಗಡಿ ಗೋಡಂಬಿ ಮಿಕ್ಸ್ ರೆಸಿಪಿ. ಇದು ರುಚಿಯಾಗಿರುವುದರಿಂದ ಹೆಚ್ಚಿನವರಿಗೆ ಇಷ್ಟವಾಗುತ್ತದೆ. ಇದನ್ನು ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಸೀಗಡಿ ಗೋಡಂಬಿ ಮಿಕ್ಸ್ ರೆಸಿಪಿ ಬೇಕಾಗುವ ಪದಾರ್ಥಗಳು:

ಸೀಗಡಿ ಮೀನು- 500ಗ್ರಾಂ

ಗೋಡಂಬಿ- 50 ಗ್ರಾಂ

ಈರುಳ್ಳಿ- 1

ಕಾರದಪುಡಿ- 2 ಚಮಚ

ಅರಶಿನಪುಡಿ- ಅರ್ಧಚಮಚ

ಉಪ್ಪು- ರುಚಿಗೆ ತಕ್ಕಷ್ಟು

ನಿಂಬೆರಸ- ಸ್ವಲ್ಪ

ಕೊತ್ತಂಬರಿ, ಪುದಿನಾ- ಸ್ವಲ್ಪ

ಗರಂಮಸಾಲೆ- ಅರ್ಧ ಚಮಚ

ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ಸೀಗಡಿ ಗೋಡಂಬಿ ಮಿಕ್ಸ್ ರೆಸಿಪಿ ಮಾಡುವ ವಿಧಾನ

ಮೊದಲಿಗೆ ಸೀಗಡಿ ಮೀನನ್ನು ಶುಚಿ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಖಾರದಪುಡಿ, ಅರಶಿನ, ಉಪ್ಪು, ಸ್ವಲ್ಪ ನಿಂಬೆರಸ ಮತ್ತು ಸ್ವಲ್ಪ ನೀರು ಹಾಕಿ ಸ್ವಲ್ಪ ಹೊತ್ತು ಇಡಿ. ಇನ್ನೊಂದೆಡೆ ಈರುಳ್ಳಿ, ಕೊತ್ತಂಬರಿ, ಪುದಿನಾವನ್ನು ಹಚ್ಚಿಟ್ಟುಕೊಳ್ಳಿ.

ಮಸಾಲೆ ಬೆರೆಸಿದ ಸೀಗಡಿ ಮೀನನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ ನಿಧಾನವಾಗಿ ಸುಮಾರು 5 ನಿಮಿಷಗಳ ಕಾಲ ಬೇಯಿಸಿ. ಬಳಿಕ ಮುಚ್ಚಳ ತೆಗೆದು ನೀರು ಆವಿಯಾಗುವವರೆಗೆ ಬಿಡಬೇಕು.

ಇದಾದ ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ಬಳಿಕ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಹುರಿಯಬೇಕು. ಆ ನಂತರ ಅದಕ್ಕೆ ಮಸಾಲೆ ಬೆರೆಸಿದ ಸೀಗಡಿ ಮೀನನ್ನು ಹಾಕಿ ಹುರಿಯಬೇಕು. ಸುಮಾರು ಮೂರು ನಿಮಿಷದ ಬಳಿಕ ಅದಕ್ಕೆ ಗೋಡಂಬಿಯನ್ನು ಸೇರಿಸಿ ಹುರಿಯಬೇಕು. ಆ ನಂತರ ಅದರ ಮೇಲೆ ಕೊತ್ತಂಬರಿ, ಪುದೀನಾ ಎಲೆ ಉದುರಿಸಿ ಹುರಿಯಬೇಕು. ಆ ನಂತರ ಗರಂ ಮಸಾಲೆ ಸೇರಿಸಿ ಚೆನ್ನಾಗಿ ತಿರುವಿ ತೆಗೆದರೆ  ಸೀಗಡಿ ಗೋಡಂಬಿ ಮಿಕ್ಸ್ ರೆಸಿಪಿ ರೆಡಿ.