ಗಸಗಸೆ ಪಾಯಸ ಮಾಡುವುದು ಹೇಗೆ?

ಗಸಗಸೆ ಪಾಯಸ ಮಾಡುವುದು ಹೇಗೆ?

LK   ¦    Sep 18, 2018 04:10:24 PM (IST)
ಗಸಗಸೆ ಪಾಯಸ ಮಾಡುವುದು ಹೇಗೆ?

ಸಾಮಾನ್ಯವಾಗಿ ಪಾಯಸಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ತಮ್ಮ ಮನೆಗಳಲ್ಲಿ ಆಗಾಗ್ಗೆ ಒಂದಲ್ಲ ಒಂದು ಬಗೆಯ ಪಾಯಸವನ್ನು ಮಾಡುತ್ತಲೇ ಇರುತ್ತಾರೆ. ಊಟದ ಜತೆಯಲ್ಲಿ ಒಂದು ಕಪ್ ಪಾಯಸವಿದ್ದರೆ ಖುಷಿಕೊಡುತ್ತದೆ. ಅದರಲ್ಲೂ ಗಸಗಸೆ ಪಾಯಸ ಎಲ್ಲರಿಗೂ ಇಷ್ಟವಾಗುತ್ತದೆ. ಜತೆಗೆ ರಾತ್ರಿ ವೇಳೆಯಲ್ಲಿ ಪಾಯಸ ಕುಡಿದು ಮಲಗಿದರೆ ಕಣ್ತುಂಬ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಗಸಗಸೆ ಪಾಯಸವನ್ನು ರುಚಿಕಟ್ಟಾಗಿ ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.

ಗಸಗಸೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ.

ಗಸಗಸೆ- 1 ಕಪ್

ಬಾದಾಮಿ- 7

ಅಕ್ಕಿ- 1 ಚಮಚ

ಹಾಲು- ಅರ್ಧ ಲೀಟರ್

ಏಲಕ್ಕಿ- 5

ಸಕ್ಕರೆ- ಅರ್ಧ ಕಪ್

ತುಪ್ಪ- 2 ಚಮಚ

ದ್ರಾಕ್ಷಿ, ಗೋಡಂಬಿ- ಸ್ವಲ್ಪ

ಕೇಸರಿ- ಸ್ವಲ್ಪ

ಜಾಯಿಕಾಯಿ ರಸ- ಸ್ವಲ್ಪ

ಲವಂಗ- 3

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಅಕ್ಕಿಯನ್ನು ನೆನೆಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಕೇಸರಿಯನ್ನು ಹಾಲಿನಲ್ಲಿ ಅದ್ದಿಟ್ಟುಕೊಳ್ಳಬೇಕು. ಮತ್ತೊಂದೆಡೆ ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು.

ಆ ನಂತರ ಗಸಗಸೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಇದರ ಜತೆಯಲ್ಲೇ ಬಾದಾಮಿಯನ್ನು ಹಾಕಿ ಹುರಿಯಬೇಕು. ನಂತರ ಬೇರೊಂದು ಪಾತ್ರೆಯಲ್ಲಿ ಕಾಯಿಸಿದ ಹಾಲನ್ನು ತೆಗೆದಿಟ್ಟುಕೊಳ್ಳಬೇಕು.

ಆ ನಂತರ ಹುರಿದ ಗಸಗಸೆ, ಬಾದಾಮಿ, ನೆನೆಸಿಟ್ಟ ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಬೇಕು. ಬಳಿಕ ತೆಗೆದು ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಕಾಯಿಸಿದ ಹಾಲನ್ನು ಸೇರಿಸಿ ನಿಧಾನ ಉರಿಯಲ್ಲಿ ಕುದಿಸಬೇಕು. ಕುದಿಯುವಾಗಲೇ ಸಕ್ಕರೆಯನ್ನು ಸೇರಿಸಬೇಕು. ತಳ ಹಿಡಿಯದಂತೆ ಮತ್ತು ಗಂಟು ಕಟ್ಟದಂತೆ ಮಾಡಲು ಸೌಟುನಿಂದ ತಿರುಗಿಸುತ್ತಿರಬೇಕು. ಅದು ಚೆನ್ನಾಗಿ ಕುದಿಯುವಾಗ ಜಾಯಿಕಾಯಿ ರಸ ಮತ್ತು ಲವಂಗವನ್ನು ಹಾಕಬೇಕು. ಪಾಯಸ ಚೆನ್ನಾಗಿ ಕುದಿದ ಬಳಿಕ ಅದನ್ನು ಇಳಿಸಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಗೂ ಹಾಲಿನಲ್ಲಿ ಅದ್ದಿಟ್ಟ ಕೇಸರಿಯನ್ನು ಹಾಕಿ ಅಲಂಕರಿಸಿದರೆ ಘಮಘಮಿಸುವ ಗಸಗಸೆ ಪಾಯಸ ರೆಡಿಯಾಗುತ್ತದೆ.