ಚಪಾತಿ, ರೊಟ್ಟಿಗೆ ಆಲೂ ಬಟಾಣಿ ಗಸಿ

ಚಪಾತಿ, ರೊಟ್ಟಿಗೆ ಆಲೂ ಬಟಾಣಿ ಗಸಿ

LK   ¦    Apr 12, 2018 12:31:35 PM (IST)
ಚಪಾತಿ, ರೊಟ್ಟಿಗೆ ಆಲೂ ಬಟಾಣಿ ಗಸಿ

ಆಲೂ ಬಟಾಣಿ ಗಸಿ ಚಪಾತಿ, ರೊಟ್ಟಿ, ದೋಸೆಗೆ ಒಳ್ಳೆಯ ಕಾಂಬಿನೇಷನ್. ಹೀಗಾಗಿ ಇದನ್ನು ಮಾಡದೆ ಇರುವವರು ಮಾಡಿ ರುಚಿ ನೋಡಬಹುದು. ತಯಾರಿಸಲು ಅಷ್ಟೇನು ಕಷ್ಟವಲ್ಲ. ಹೀಗಾಗಿ ಯಾರು ಬೇಕಾದರೂ ಮಾಡಿ ಸವಿಯಲು ಅಡ್ಡಿಯಿಲ್ಲ.

ಆಲೂ ಬಟಾಣಿ ಗಸಿ ತಯಾರಿಸಲು ಬೇಕಾಗುವ ಪದಾರ್ಥಗಳು ಹೀಗಿವೆ.
ಹಸಿ ಬಟಾಣಿ- 1/4 ಕೆಜಿ
ಆಲೂಗೆಡ್ಡೆ- 2
ಈರುಳ್ಳಿ-2
ಟೋಮೆಟೊ-2
ಗರಂಮಸಾಲೆ- 1 ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಕೆಂಪು ಮೆಣಸು ಪುಡಿ -2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- 2 ಚಮಚ

ತಯಾರಿಸುವ ವಿಧಾನ ಹೀಗಿದೆ...
ಆಲೂ ಬಟಾಣಿ ಗಸಿ ಮಾಡುವ ಮುನ್ನ ಪ್ರತ್ಯೇಕವಾಗಿ ಬಟಾಣಿ ಮತ್ತು ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಬೆಂದ ಆಲೂಗೆಡ್ಡೆಯ ಸಿಪ್ಪೆಯನ್ನು ತೆಗೆದು ಕೈಯಿಂದ ಹಿಸುಕಿ ಪುಡಿ ಮಾಡಿಕೊಳ್ಳಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಂಡು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ನಿಧಾನ ಉರಿಯಲ್ಲಿ ಕೆಂಪಗೆ ಬಾಡುವಂತೆ ಹುರಿಯಬೇಕು. ಆ ನಂತರ ಅದಕ್ಕೆ ಹಚ್ಚಿದ ಟೋಮೆಟೊ ಹಾಕಿ ಬಾಡಿಸಬೇಕು. ಇದಾದ ಬಳಿಕ ತೆಗೆದಿಟ್ಟುಕೊಂಡಿದ್ದ ಮಸಾಲೆ ಪದಾರ್ಥಗಳಾದ ಮೆಣಸಿನ ಪುಡಿ, ಗರಂಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನು ಸುರಿದು ಚೆನ್ನಾಗಿ ಮಿಕ್ಸ್ ಮಾಡಿ ಹುರಿಯಬೇಕು. ಇದಾದ ಬಳಿಕ ಬೇಯಿಸಿಟ್ಟು ಕೊಂಡಿದ್ದ ಆಲೂಗೆಡ್ಡೆಯ ಚೂರು ಮತ್ತು ಬಟಾಣಿಯನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಸ್ವಲ್ಪ ನೀರು ಹಾಕಿ ಬೇಯಿಸಿ ರುಚಿಗೆ ತಕ್ಕಂತೆ ಉಪ್ಪು ಹಾಕಬೇಕು. ಆ ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಇಳಿಸಿದರೆ ಆಲೂ ಬಟಾಣಿ ಗಸಿ ರೆಡಿ.