ಗೌರಿಹಬ್ಬಕ್ಕೆ ಸ್ಪೆಷಲ್ ಘಮ್ಮೆನ್ನುವ ಸೂಸಲು ಕಡಬು

ಗೌರಿಹಬ್ಬಕ್ಕೆ ಸ್ಪೆಷಲ್ ಘಮ್ಮೆನ್ನುವ ಸೂಸಲು ಕಡಬು

LK   ¦    Sep 11, 2018 02:42:21 PM (IST)
ಗೌರಿಹಬ್ಬಕ್ಕೆ ಸ್ಪೆಷಲ್ ಘಮ್ಮೆನ್ನುವ ಸೂಸಲು ಕಡಬು

ಕಡಬನ್ನು ಮಾಮೂಲಿಯಾಗಿ ಎಲ್ಲ ದಿನಗಳಲ್ಲೂ ಮಾಡುತ್ತಾರೆ. ಆದರೆ ಸೂಸಲು ಕಡಬನ್ನು ಮಾಡುವುದು ಅಪರೂಪ. ಇದನ್ನು ಗೌರಿ ಹಬ್ಬದ ಸಮಯದಲ್ಲಿ ಹೆಚ್ಚಿನವರು ತಮ್ಮ ಮನೆಗಳಲ್ಲಿ ತಯಾರಿಸುತ್ತಾರೆ. ಸೂಸಲು ಕಡಬು ಮಾಡುವ ವಿಧಾನವೂ ಬಹಳ ಸುಲಭವೇ. ಇದಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಸೂಸಲು ಕಡಬು ಮಾಡಲು ಬೇಕಾಗುವ ಪದಾರ್ಥಗಳು

ಅಕ್ಕಿ-1 ಕಪ್

ಸಕ್ಕರೆ-100 ಗ್ರಾಂ

ಎಳ್ಳು-100 ಗ್ರಾಂ

ಕಾಯಿತುರಿ- 1 ಬಟ್ಟಲು

ಉಪ್ಪು- ರುಚಿಗೆ ತಕ್ಕಷ್ಟು

ಅರಶಿನ ಎಲೆ- ಮೂರು

ಮಾಡುವ ವಿಧಾನ ಹೀಗಿದೆ.

ಒಂದೆಡೆ ಕಾಯಿ ತುರಿ, ಸಕ್ಕರೆ, ಎಳ್ಳು(ಸ್ವಲ್ಪ ಹುರಿದು ಹಾಕಬೇಕು) ಸೇರಿಸಿ ಚೆನ್ನಾಗಿ ಕಲೆಸಿ ಹೂರಣ ಮಾಡಿಕೊಳ್ಳಬೇಕು. ಇದಕ್ಕೂ ಮೊದಲು ಅಕ್ಕಿಯನ್ನು ನೆನೆಸಿಟ್ಟು ಆ ನಂತರ ಚೆನ್ನಾಗಿ ನುಣ್ಣಗೆ ರುಬ್ಬಬೇಕು. ಬಳಿಕ ತೆಗೆದು ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿಕೊಂಡು ಅಗಲವಾಗಿರುವ ಪಾತ್ರೆಯಲ್ಲಿ ಒಲೆಯ ಮೇಲಿಟ್ಟು ಸೌಟುನಿಂದ ತಿರುಗಿಸುತ್ತಾ ಗಂಟು ಕಟ್ಟದಂತೆ ನೋಡಿಕೊಳ್ಳಬೇಕು. ಹೀಗೆ ಮಾಡುತ್ತಾ ಅದು ಗಟ್ಟಿಯಾಗಿ ಅಂಟು ಆಗುತ್ತಿದ್ದಂತೆಯೇ ಕೆಳಗಿಳಿಸಿಕೊಳ್ಳಬೇಕು.

ಬಳಿಕ ನಮಗೆ ಎಷ್ಟು ಬೇಕೋ ಅಷ್ಟು ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅದರೊಳಗೆ ಮೊದಲು ಮಾಡಿಟ್ಟುಕೊಂಡ ಹೂರಣವನ್ನು ಹಾಕಿ ಕಡಬು ಕಟ್ಟಬೇಕು. ಹೀಗೆ ಕಟ್ಟಿದ ಕಡಬನ್ನು ಒಂದು ಕಲಸಿಗೆಯಲ್ಲಿ ಹಾಕಬೇಕು. ಕಡಬು ಹಾಕುವ ಮುನ್ನ ಕಲಸಿಗೆ ಒಳಗೆ ಅರಶಿನ ಎಲೆಯನ್ನು ಇಡಬೇಕು. ಅದರ ಮೇಲೆ ಕಡಬು ಇಟ್ಟು ಬಳಿಕ ಮುಚ್ಚಳ ಮುಚ್ಚಿ ಉರಿಯಲ್ಲಿ ಬೇಯಿಸಬೇಕು. ಚೆನ್ನಾಗಿ ಬೆಂದ ಬಳಿಕ ಕಲಸಿಗೆ ಮುಚ್ಚಳ ತೆಗೆದರೆ ಘಮ್ಮೆನ್ನುವ ಸೂಸಲು ಕಡಬು ರೆಡಿಯಾಗಿರುತ್ತದೆ.