ಮೆಂತ್ಯ ಎಗ್ ಬುರ್ಜಿ ಮಾಡೋದು ಹೇಗೆ?

ಮೆಂತ್ಯ ಎಗ್ ಬುರ್ಜಿ ಮಾಡೋದು ಹೇಗೆ?

LK   ¦    Feb 21, 2019 12:58:01 PM (IST)
ಮೆಂತ್ಯ ಎಗ್ ಬುರ್ಜಿ ಮಾಡೋದು ಹೇಗೆ?

ಬಹುಶಃ ಎಗ್ ಬುರ್ಜಿ ಎಲ್ಲರೂ ಮಾಡಿರುತ್ತಾರೆ. ಆದರೆ ಅದಕ್ಕೆ ಒಂದಿಷ್ಟು ಮೆಂತ್ಯ ಸೊಪ್ಪು ಸೇರಿಸಿ ಮಾಡಿದರೆ ನಾಲಿಗೆಗೂ ರುಚಿ ಆರೋಗ್ಯಕ್ಕೂ ಉತ್ತಮ. ಇಷ್ಟಕ್ಕೂ ಮೆಂತ್ಯ ಎಗ್ ಬುರ್ಜಿ ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಮೆಂತ್ಯ ಎಗ್ ಬುರ್ಜಿಗೆ ಬೇಕಾಗುವ ಪದಾರ್ಥಗಳು
ಮೆಂತ್ಯ ಸೊಪ್ಪು- ಒಂದು ಕಟ್ಟು
ಮೊಟ್ಟೆ- ಆರು
ಈರುಳ್ಳಿ-ಒಂದು
ಮೆಣಸಿನ ಪುಡಿ- ಒಂದು ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್- ಅರ್ಧ ಚಮಚ
ಗರಂ ಮಸಾಲೆ- ಒಂದು ಚಮಚ
ಜೀರಿಗೆ ಪುಡಿ- ಅರ್ಧ ಚಮಚ
ಅರಶಿನ- ಕಾಲು ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ

ಮಾಡುವ ವಿಧಾನ ಹೀಗಿದೆ: ಮೊದಲಿಗೆ ಮೆಂತ್ಯ ಸೊಪ್ಪನ್ನು ಶುಚಿಗೊಳಿಸಿ ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇದೇ ರೀತಿ ಈರುಳ್ಳಿಯನ್ನು ಕೂಡ ಹಚ್ಚಿಟ್ಟುಕೊಳ್ಳಬೇಕು. ಆ ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಸ್ವೌವ್ ಮೇಲಿಟ್ಟು ಅದು ಕಾದ ಬಳಿಕ ಅದಕ್ಕೆ ಹಚ್ಚಿದ ಈರುಳ್ಳಿಯನ್ನು ಹಾಕಿ ನಿಧಾನ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಅದು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಾಕಿ ತಿರುಗಿಸಿ ಆ ನಂತರ ಹಚ್ಚಿಟ್ಟ ಮೆಂತ್ಯ ಸೊಪ್ಪನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ಬಳಿಕ ಜೀರಿಗೆ, ಮೆಣಸು, ಅರಿಶಿನ ಪುಡಿಯನ್ನು ಹಾಕಿ ಬೇಯುತ್ತಿರುವ ಮೆಂತ್ಯ ಸೊಪ್ಪಿನೊಂದಿಗೆ ಸೌಟನ್ನು ತಿರುಗಿಸುತ್ತಾ ಹುರಿಯಬೇಕು. ಸೊಪ್ಪು ಬೆಂದ ನಂತರ ಮೊಟ್ಟೆಯನ್ನು ಒಡೆದು ಅದಕ್ಕೆ ಸುರಿದು ಉಪ್ಪು ಹಾಕಿ ಚೆನ್ನಾಗಿ ಮಿಶ್ರವಾಗುವಂತೆ ತಿರುಗಿಸಬೇಕು. ಜತೆಗೆ ಗರಂ ಮಸಾಲೆ ಉದುರಿಸಿ ತಿರುಗಿಸುತ್ತಾ ಬೇಯಿಸಬೇಕು. ಆ ನಂತರ ಒಲೆಯಿಂದ ಇಳಿಸಿದರೆ ಮೆಂತ್ಯ ಎಗ್ ಬುರ್ಜಿ ರೆಡಿ.