ಮೆಂತ್ಯೆಸೊಪ್ಪಿನ ಮಾಂಸದಡುಗೆ ರುಚಿ ನೋಡಿದರೆ ಬಿಡರು...

ಮೆಂತ್ಯೆಸೊಪ್ಪಿನ ಮಾಂಸದಡುಗೆ ರುಚಿ ನೋಡಿದರೆ ಬಿಡರು...

Dec 04, 2017 02:51:19 PM (IST)
ಮೆಂತ್ಯೆಸೊಪ್ಪಿನ ಮಾಂಸದಡುಗೆ ರುಚಿ ನೋಡಿದರೆ ಬಿಡರು...

ಮೆಂತ್ಯೆ ಸೊಪ್ಪು ಕಹಿಯಾಗಿರುವ ಕಾರಣದಿಂದಾಗಿ ಇದರ ಪದಾರ್ಥಗಳು ಎಂದರೆ ಹೆಚ್ಚಿನವರಿಗೆ ಇಷ್ಟವಾಗಲ್ಲ. ಆದರೆ ಇದರಲ್ಲಿ ಇರುವ ಕೆಲವೊಂದು ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದುಬಂದಿದೆ. ಮೆಂತ್ಯೆ ಸೊಪ್ಪನ್ನು ಇತರ ಕೆಲವು ಸಾಮಗ್ರಿಗಳೊಂದಿಗೆ ಸೇರಿಸಿಕೊಂಡು ತಯಾರಿಸಿದಾಗ ಅದರ ರುಚಿ ಕೂಡ ಹೆಚ್ಚಾಗುವುದು. ಮೆಂತ್ಯೆ ಸೊಪ್ಪಿನಿಂದ ಮಾಡುವ ಮಾಂಸದ ಅಡುಗೆ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.

ಬೇಕಾಗುವ ಸಾಮಗ್ರಿಗಳು
1 ಕೆಜಿ ಎಲುಬಿಲ್ಲದ ಮಾಂಸ
1 ಕೆಜಿ ತಾಜಾ ಮೆಂತ್ಯೆ ಸೊಪ್ಪು ಕತ್ತರಿಸಿರುವುದು.
1 ಕಪ್ ಸಾಸಿವೆ ಎಣ್ಣೆ
1 ಚಮಚ ಶುಂಠಿ ಹುಡಿ
2 ಚಮಚ ಜೀರಿಗೆ ಹುಡಿ
1 ಚಮಚ ಅರಶಿನ ಹುಡಿ
1 ಚಮಚ ಹಿಂಗು
2 ಲವಂಗ
4 ಏಲಕ್ಕಿ
2 ದಾಲ್ಚಿನಿ ಚಕ್ಕೆ
3 ಚಮಚ ಒಣಗಿದ ಮೆಂತ್ಯೆ
1 ಕಪ್ ಹಾಲು
ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ
*ಮೆಂತ್ಯೆ ಸೊಪ್ಪನ್ನು ಸರಿಯಾಗಿ ಸ್ವಚ್ಛಗೊಳಿಸಿ ಕತ್ತರಿಸಿಕೊಂಡು ಬೇಯಿಸಿ. ಸೊಪ್ಪು ಮೆತ್ತಗಾಗಲಿ.
*ಮಾಂಸವನ್ನು ಮಧ್ಯಮ ಗಾತ್ರದ ತುಂಡುಗಳನ್ನಾಗಿ ಮಾಡಿ. ಮೂರು ಕಪ್ ನೀರು ಹಾಕಿದ ಪಾತ್ರೆಗೆ ಮಾಂಸ ಹಾಕಿ ಬೇಯಿಸಿ ಅರ್ಧ ಬೇಯಿಸಿದ ಬಳಿಕ ತೆಗೆದು ಸೋಸಿಕೊಳ್ಳಿ. ನೀರನ್ನು ರಸ ಮಾಡಿಕೊಳ್ಳಲು ತೆಗೆದಿಡಿ.
*ಒಂದು ತವಾಗೆ ಈ ನೀರನ್ನು ಹಾಕಿ. ಅದಕ್ಕೆ ಅರಶಿನ ಹುಡಿ, ಜೀರಿಗೆ ಹುಡಿ, ಎರಡು ಲವಂಗ, ನಾಲ್ಕು ಕಂದು ಏಲಕ್ಕಿ, ದಾಲ್ಚಿನಿ ಚಕ್ಕೆ, ಒಂದು ಚಮಚ ಅರಶಿನ ಹುಡಿ ಮತ್ತು ಒಂದು ಕಪ್ ಹಾಲು ಹಾಕಿ. ಇದು ಹತ್ತು ನಿಮಿಷ ಕಾಲ ಕುದಿಸಿದ ಬಳಿಕ ಬದಿಗೆ ತೆಗೆದಿಡಿ.
* ಬೇರೆ ತವಾದಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಒಂದು ಚಮಚ ಹಿಂಗು ಮತ್ತು 1/2 ಚಮಚ ಉಪ್ಪು ಹಾಕಿ.
*ಬೇಯಿಸಿದ ಮೆಂತ್ಯೆ ಸೊಪ್ಪನ್ನು ಕೈಯಿಂದ ಹಿಚುಕಿಕೊಳ್ಳಿ(ಮಿಕ್ಸಿ ಬಳಸಬೇಡಿ) ಇದಕ್ಕೆ ಎಣ್ಣೆ ಹಾಕಿ ಎರಡು ನಿಮಿಷ ಕಾಯಿಸಿ ಮತ್ತು ಬೇಯಿಸಿದ ಮಾಂಸದ ತುಂಡುಗಳನ್ನು ಹಾಕಿ ಮತ್ತು ಕೆಲವು ನಿಮಿಷ ಕಾಲ ಬೇಯಿಸಿ.
* ನೀವು ಈ ಮೊದಲು ತಯಾರಿಸಿದ ರಸವನ್ನು ಇದಕ್ಕೆ ಹಾಕಿ ಮತ್ತು ಇದು ಸರಿಯಾಗಿ ಕುದಿಯಲು ಬಿಡಿ.
* ಒಣಗಿದ ಮೆಂತ್ಯೆ ಸೊಪ್ಪನ್ನು ಮೇಲೆ ಸಿಂಪಡಿಸಿ. ಅನ್ನ ಅಥವಾ ಚಪಾತಿ ಜತೆಗೆ ಇದನ್ನು ಬಡಿಸಿ.