ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವ ನುಗ್ಗೆಕಾಯಿ

ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವ ನುಗ್ಗೆಕಾಯಿ

LK   ¦    Apr 21, 2018 01:35:41 PM (IST)
ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವ ನುಗ್ಗೆಕಾಯಿ

ನಾವು ನಿತ್ಯ ತರಕಾರಿಯಾಗಿ ಸೇವಿಸುವ ನುಗ್ಗೆಯಲ್ಲಿ ಹಲವು ರೀತಿಯ ದೇಹಕ್ಕೆ ಪೋಷಕ ನೀಡುವ ಶಕ್ತಿಯಿದೆ, ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದರಲ್ಲಿ ಎಂತಹ ಗುಣ ಇದೆ ಎಂಬುದನ್ನು ನೋಡಿದರೆ ಅಚ್ಚರಿಯಾಗುತ್ತದೆ.

ನುಗ್ಗೆಕಾಯಿ ಮತ್ತು ಸೊಪ್ಪನ್ನು ತರಕಾರಿಯಾಗಿ ಉಪಯೋಗಿಸುವುದರಿಂದ ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುತ್ತದೆ. ಕ್ಯಾಲ್ಸಿಯಂ, ಕಬ್ಬಿಣ, ಎ ಮತ್ತು ಬಿ ಜೀವಸತ್ವಗಳು ನುಗ್ಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದಾಗಿ ಬೆಳವಣಿಗೆ ಅನುಕೂಲವಾಗಿದೆ. ಅದರಲ್ಲೂ ಮಕ್ಕಳ ಬೆಳವಣಿಗೆಗೆ ಪೋಷಕ ಶಕ್ತಿಯನ್ನು ನೀಡುತ್ತದೆ.

ನುಗ್ಗೆ ಸೊಪ್ಪಿನಲ್ಲಿ ಎ ಮತ್ತು ಬಿ ಅನ್ನಾಂಗ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಪಲ್ಯ, ಸಾರು ಮಾಡಿ ತಿನ್ನುವ ಮೂಲಕ ಅಥವಾ ಎಳೆಯ ಸೊಪ್ಪನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ ಹಾಕಿ ಬೇಯಿಸಿ ಬಳಿಕ ರಸವನ್ನು ಕುಡಿಯುವುದು ಒಳ್ಳೆಯದು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಎರಡು ಚಮಚ ನುಗ್ಗೆ ರಸಕ್ಕೆ ಅಷ್ಟೇ ಹಾಲನ್ನು ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಗರ್ಭಿಣಿ ಸ್ತ್ರೀಯರು ನುಗ್ಗೆಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಅಗತ್ಯವಿರುವ ಸುಣ್ಣದ ಅಂಶ ಶರೀರಕ್ಕೆ ಸೇರುತ್ತದೆ.

ಶರೀರದ ಶಕ್ತಿ ನೀಡಲು ಅವಶ್ಯಕವಾದ ಸಸಾರಜನಕ, ಅಮೈನೋ ಆಮ್ಲ ನುಗ್ಗೆಯಲ್ಲಿದೆ. ನಮ್ಮಲ್ಲಿ ಕಾಣಿಸಿಕೊಳ್ಳುವ ನರ ದೌರ್ಬಲ್ಯ ಹೋಗಲಾಡಿಸಲು ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ನಿವಾರಿಸಲು ಕರಿಮೆಣಸಿನ ಪುಡಿ, ನಿಂಬೆ ರಸವನ್ನು ಅರ್ಧ ಲೋಟ ನುಗ್ಗೆ ರಸಕ್ಕೆ ಸೇರಿಸಿ ಕುಡಿಯಬಹುದಾಗಿದೆ.

ಸೊಪ್ಪಿನ ರಸ ಸೇವಿಸುವುದರಿಂದ ಮಧುಮೇಹ, ರಕ್ತಹೀನತೆಯ ನಿಯಂತ್ರಣವಲ್ಲದೆ ಕಾಮಾಲೆ ಮತ್ತು ಜಂತು ಹುಳು ನಿವಾರಣೆ ಸಾಧ್ಯವಾಗುತ್ತದೆ.

ಹೆಣ್ಣು ಮಕ್ಕಳು ಕೂದಲು ಸೊಂಪಾಗಿ ಬೆಳೆಯಬೇಕೆಂದು ಆಸೆ ಪಡುತ್ತಾರೆ ಇದನ್ನು ಈಡೇರಿಸಿಕೊಳ್ಳಲು ನುಗ್ಗೆ ಸೊಪ್ಪಿನಿಂದ ಸಾಧ್ಯವಿದೆ. ಅದು ಹೇಗೆಂದರೆ ನುಗ್ಗೆ ಸೊಪ್ಪನ್ನು ಅರೆದು ಕೊಬ್ಬರಿ ಎಣ್ಣೆಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಬೇಕು. ಇದರಿಂದ ತಲೆಯ ಹೊಟ್ಟು ಕೂಡ ಕಡಿಮೆಯಾಗಲಿದೆ.

ಇನ್ನು ನುಗ್ಗೆರಸ ಮತ್ತು ನಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಕಾಂತಿ ಮೂಡಲು ಸಾಧ್ಯವಾಗುತ್ತದೆ. ಇಡ್ಲಿ, ದೋಸೆ, ಚಪಾತಿಯನ್ನು ನುಗ್ಗೆ ಸೊಪ್ಪು ಸೇರಿಸಿ ಮಾಡಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ.

ಒಟ್ಟಾರೆ ನುಗ್ಗೆ ಕಾಯಿ, ಸೊಪ್ಪು, ಹೂ ಎಲ್ಲವೂ ತರಕಾರಿಯಾಗಿ ಉಪಯೋಗಿಸಲು ಸಾಧ್ಯವಾಗುವುದರಿಂದ ಇದಕ್ಕೆ ಮನೆಯ ಹಿತ್ತಲಲ್ಲಿ ಜಾಗ ನೀಡಿದರೆ ಹಿತ್ತಲ ಗಿಡವೂ ಮದ್ದು ಮಾತ್ರವಲ್ಲ ತರಕಾರಿಯಾಗಿಯೂ ಉಪಯೋಗವಾಗುತ್ತೆ ಎನ್ನುವುದರಲ್ಲಿ ಸಂಶಯವಿಲ್ಲ.