ಸಿಂಪಲ್ ವೆಜಿಟಬಲ್ ಬಾತ್

ಸಿಂಪಲ್ ವೆಜಿಟಬಲ್ ಬಾತ್

LK   ¦    Sep 04, 2018 03:15:56 PM (IST)
ಸಿಂಪಲ್ ವೆಜಿಟಬಲ್ ಬಾತ್

ವೆಜಿಟಬಲ್ ಬಾತ್ ಮಾಡೋದು ಬಲು ಸುಲಭ. ಇದು ರುಚಿಯಾಗಿರುತ್ತದೆಯಲ್ಲದೆ, ಆ ಮೂಲಕ ತರಕಾರಿಗಳು ದೇಹಕ್ಕೆ ಆರೋಗ್ಯ ನೀಡುವಲ್ಲಿಯೂ ಸಹಕಾರಿಯಾಗುತ್ತವೆ. ಇಷ್ಟಕ್ಕೂ ರುಚಿಯಾದ ಸಿಂಪಲ್ ವೆಜಿಟಬಲ್ ಬಾತ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗುತ್ತಿದೆ.

ಬೇಕಾಗುವ ಪದಾರ್ಥಗಳು ಹೀಗಿವೆ..

ಅಕ್ಕಿ- ಒಂದು ಪಾವು

ಕಾಯಿ ತುರಿ- ಅರ್ಧ ಬಟ್ಟಲು

ಹಸಿಮೆಣಸಿನಕಾಯಿ- 3

ಶುಂಠಿ, ಬೆಳ್ಳುಳ್ಳಿ ಪೇಸ್ಟ್- 3 ಚಮಚ

ಚಕ್ಕೆ- ಸ್ವಲ್ಪ

ಮೊಗ್ಗು- ಸ್ವಲ್ಪ

ಧನಿಯಾ- ಸ್ವಲ್ಪ

ಲವಂಗ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಹಸಿಬಟಾಣಿ- 50ಗ್ರಾಂ

ಈರುಳ್ಳಿ- ಒಂದು

ಕರಿಬೇವು- ಸ್ವಲ್ಪ

ಬೀನ್ಸ್- 100ಗ್ರಾಂ

ಕ್ಯಾರೆಟ್- 100ಗ್ರಾಂ

ಗೆಡ್ಡಕೋಸು- 100ಗ್ರಾಂ

ಟೊಮ್ಯಟೋ- 2

ಕೊತ್ತಂಬರಿ ಸೊಪ್ಪು- ಅರ್ಧಕಟ್ಟು

ತುಪ್ಪ- ಎರಡು ಚಮಚ

ವೆಜಿಟಬಲ್ ಬಾತ್ ಮಾಡುವ ವಿಧಾನ

ಮೊದಲಿಗೆ ಈರುಳ್ಳಿ, ಸೇರಿದಂತೆ ತರಕಾರಿಗಳನ್ನು ಹಚ್ಚಿಟ್ಟುಕೊಳ್ಳಬೇಕು ಮತ್ತೊಂದೆಡೆ ಮಸಾಲೆ ಪದಾರ್ಥಗಳಾದ ಕಾಯಿತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಇದರ ಜತೆ ಚಕ್ಕೆ, ಮೊಗ್ಗು, ದನಿಯಾ ಲವಂಗವನ್ನು (ಎಣ್ಣೆಯಲ್ಲಿ ಸ್ವಲ್ಪ ಬಿಸಿ ಮಾಡಿಕೊಂಡು) ಅದನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಬೇಕು.

ಇದಾದ ಬಳಿಕ ಕುಕ್ಕರ್‍ ನಲ್ಲಿ ತುಪ್ಪ ಹಾಕಿ ಅದರಲ್ಲಿ ಕರಿಬೇವು, ಬಟಾಣಿ ಹಾಗೂ ಈರುಳ್ಳಿ, ಬೀನ್ಸ್, ಕ್ಯಾರೆಟ್, ಗೆಡ್ಡೆಕೋಸು, ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಬೇಕು. ಆ ನಂತರ ರುಬ್ಬಿರುವ ಮಸಾಲೆಯನ್ನು ಹಾಕಬೇಕು. ಆಮೇಲೆ ಅಕ್ಕಿ ಹಾಕಿ ಅಗತ್ಯದಷ್ಟು ನೀರು ಹಾಕಿ ಒಂದೆರಡು ವಿಶಲ್ ಕೂಗಿಸಿ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ವೆಜಿಟಬಲ್ ಬಾತ್ ರೆಡಿ.