ಬೆಣ್ಣೆಹಣ್ಣು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ಬೆಣ್ಣೆಹಣ್ಣು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

LK   ¦    Apr 19, 2018 12:27:34 PM (IST)
ಬೆಣ್ಣೆಹಣ್ಣು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ಹಣ್ಣುಗಳು ಯಾವುದೇ ಆಗಿರಲಿ. ಅದು ತನ್ನದೇ ಆದ ರುಚಿ ಮತ್ತು ದೇಹಕ್ಕೆ ಆರೋಗ್ಯಕಾರಿ ಪೋಷಕಾಂಶವನ್ನು ನೀಡುವ ಗುಣ ಹೊಂದಿರುತ್ತದೆ. ಇಂದಿನ ದಿನಗಳಲ್ಲಿ ಮಾರುಕಟ್ಟೆಗೆ ಹಲವು ರೀತಿಯ ಹಣ್ಣುಗಳು ಬರುತ್ತವೆ. ಈ ಹಣ್ಣುಗಳ ಪೈಕಿ ನಮ್ಮ ಮನೆಯ ಹಿತ್ತಲಲ್ಲೇ ಬೆಳೆಯಬಹುದಾದ ಬೆಣ್ಣೆ ಹಣ್ಣು ಕೂಡ ಒಂದಾಗಿದ್ದು, ಈ ಹಣ್ಣನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಬೆಣ್ಣೆ ಹಣ್ಣಿನಲ್ಲಿ ನಾರಿನ ಅಂಶ, ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಬಿ ಇದೆ. ಶೇ. 4 ರಷ್ಟು ಪ್ರೋಟೀನ್ ಹಾಗೂ ಶೇ.30ರಷ್ಟು ಕೊಬ್ಬಿನ ಅಂಶ, ಅಲ್ಪ ಪಿಷ್ಟಶಾಕರ ಗುಣ ಸೇರಿದಂತೆ ಉತ್ಕ್ರಷ್ಟ ಪೋಷಕಾಂಶಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ.

ನಮ್ಮ ಮನೆಯ ಬಳಿ, ತೋಟದಲ್ಲಿ ಬೆಳೆದ ಹಣ್ಣನ್ನೇ ಉಪಯೋಗಿಸಿದರೆ ಯಾವುದೇ ರಾಸಾಯನಿಕದ ಸೋಂಕಿಲ್ಲದೆ ಆರೋಗ್ಯಕರ ಹಣ್ಣನ್ನು ಸೇವಿಸಬಹುದಾಗಿದೆ. ಸಾಮಾನ್ಯವಾಗಿ ಮಲೆನಾಡಿನ ಅಡಿಕೆ ತೋಟ, ಕಾಫಿ ತೋಟಗಳ ನಡುವೆ ಅಥವಾ ಮನೆ ಬಳಿಯಲ್ಲಿ ಬೆಣ್ಣೆ ಹಣ್ಣಿನ ಮರಗಳು ಕಾಣಸಿಗುತ್ತವೆ. ಈಗಂತೂ ಹಣ್ಣಿನ ಕಾಲವಾಗಿರುವುದರಿಂದ ವಿವಿಧ ಗಾತ್ರಗಳಲ್ಲಿ ಮರದಲ್ಲಿ ತೂಗುತ್ತಿರುತ್ತವೆ.

ಮನೆ ಬಳಿ ಒಂದಷ್ಟು ಜಾಗವಿದ್ದರೆ ಈ ಮರವನ್ನು ನೆಡುವುದರಿಂದ ಪೌಷ್ಠಿಕಾಂಶವುಳ್ಳ ಆರೋಗ್ಯದಾಯಕ ಹಣ್ಣನ್ನು ಪಡೆಯಲು ಸಾಧ್ಯವಾಗುತ್ತದೆ.

ಬೆಣ್ಣೆ ಹಣ್ಣು ಮೂಲತಃ ಅಮೇರಿಕಾದ ಉಷ್ಣವಲಯದ್ದಾಗಿದ್ದು ಇದರ ಹೆಸರು ಅವೊಕಡೊ. ಬಹುಶಃ ಒಂದಕ್ಕಿಂತ ಹೆಚ್ಚಿನ ಕಾಡು ಪ್ರಭೇದಗಳಿಂದಾಗಿ ಇದು ಮೆಕ್ಸಿಕೊ ಮತ್ತು ಮಧ್ಯ ಅಮೇರಿಕಾ ಭಾಗದಲ್ಲಿ ಜನ ಜನಿತವಾಗಿ ಮುಂದೆ ವಿಶ್ವದ ಇತರ ಭಾಗಗಳಿಗೂ ಹರಡಿತು ಎಂದು ಹೇಳಲಾಗಿದೆ.

ಇನ್ನು ಬೆಂಗಳೂರಿಗೆ ಹೇಗೆ ಬಂತು ಎಂಬುದನ್ನು ನೋಡುವುದಾದರೆ 20ನೇ ಶತಮಾನದ ಆದಿಯಲ್ಲಿ ರಾಯಲ್ ಬೋಟಾನಿಕಲ್ ಗಾರ್ಡನ್ಸ್ ನಿಂದ ಅಮೇರಿಕನ್ ಪಾದ್ರಿಯೊಬ್ಬರು ತಂದರು ಎನ್ನಲಾಗಿದೆ. ಇದೇ ಪಾದ್ರಿ ಶ್ರೀಲಂಕಾಕ್ಕೂ ಈ ಹಣ್ಣನ್ನು ಪರಿಚಯಿಸಿದರಂತೆ.

ಬೆಂಗಳೂರಿಗೆ ಬಂದ ಬೆಣ್ಣೆ ಹಣ್ಣು ಮುಂದೆ ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಸಿಕ್ಕಿಂ ಹಾಗೂ ಇನ್ನಿತರ ರಾಜ್ಯಗಳಿಗೂ ಹರಡಿತಂತೆ. ಹಣ್ಣಿನ ಸಿಪ್ಪೆ ಮತ್ತು ಬೀಜದ ನಡುವಿನ ಮೃದುವಾದ ತಿರುಳನ್ನು ತಿನ್ನಲು ಬಳಸಬಹುದು. ಇದು ಸಪ್ಪೆಯಾಗಿದ್ದು, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ತಿನ್ನಬಹುದು. ಇದರಿಂದ ಪಾನೀಯ ಮಿಲ್ಕ್ ಶೇಕ್ ಕೂಡ ಮಾಡಬಹುದಾಗಿದೆ.

ಬೀಜದಿಂದ ಸಂತಾನೋತ್ಪತ್ತಿ ಮಾಡಬಹುದಾಗಿದ್ದು, ಗಿಡವು ಹೆಚ್ಚು ಗೊಬ್ಬರ ನೀರು ಬಯಸದೆ ಶೀಘ್ರವಾಗಿ ಬೆಳೆದು ಫಸಲು ನೀಡುತ್ತದೆ. ದಕ್ಷಿಣ ಭಾರತದ ಸಮಶೀತೋಷ್ಣ ಹವಾಮಾನಕ್ಕೆ ಇದು ಹೊಂದಿಕೊಂಡಿರುವುದರಿಂದ ಎಲ್ಲ ಕಡೆಯೂ ಬೆಳೆಯಬಹುದಾಗಿದೆ.

ದುಬಾರಿ ಹಣ ನೀಡಿ ರಾಸಾಯನಿಕಯುಕ್ತ ಹಣ್ಣುಗಳನ್ನು ಖರೀದಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ನಮ್ಮ ಸುತ್ತಮುತ್ತ ಸಿಗುವ ಮತ್ತು ಬೆಳೆಯಲು ಅನುಕೂಲವಾಗುವ ಹಣ್ಣನ್ನು ಬೆಳೆಸಿ ತಿನ್ನುವುದು ಜಾಣತನವಲ್ಲವೆ?.