ಮೆಂತ್ಯ ಹುಳಿ ಸೇವಿಸಿ ಆರೋಗ್ಯವಾಗಿರಿ

ಮೆಂತ್ಯ ಹುಳಿ ಸೇವಿಸಿ ಆರೋಗ್ಯವಾಗಿರಿ

LK   ¦    Oct 08, 2018 03:20:14 PM (IST)
ಮೆಂತ್ಯ ಹುಳಿ ಸೇವಿಸಿ ಆರೋಗ್ಯವಾಗಿರಿ

ಮೆಂತ್ಯ ನಮ್ಮ ಆರೋಗ್ಯದ ದೃಷ್ಠಿಯಿಂದ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಮೆಂತ್ಯ ಕಾಳುಗಳನ್ನು ಬಾಯಲ್ಲಿ ಹಾಗೆಯೇ ಇಟ್ಟುಕೊಳ್ಳುವ ಅಭ್ಯಾಸ ಮಾಡಿದರೆ ಡಯಾಬಿಟಿಸ್ ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ಔಷಧಿಯ ಗುಣ ಹೊಂದಿರುವ ಮೆಂತ್ಯವನ್ನು ನಾವು ನಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಉಪಯೋಗಿಸುತ್ತೇವೆ. ಇಂತಹ ಮೆಂತ್ಯದಿಂದಲೇ ಹುಳಿ ಮಾಡಿ ಸೇವಿಸಿದರೆ ನಾಲಿಗೆ ರುಚಿ ಮತ್ತು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ.

ಹಾಗಾದರೆ ಮೆಂತ್ಯ ಹುಳಿ ಮಾಡುವುದು ಹೇಗೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು

ಮೆಂತ್ಯ- ಒಂದು ಹಿಡಿ

ಬೇಳೆ- 1 ಹಿಡಿ

ಒಣಮೆಣಸಿನಕಾಯಿ- ಮೂರು(ಖಾರಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು)

ಕರಿಬೇವು ಸೊಪ್ಪು- ಸ್ವಲ್ಪ

ಹುಣಸೆಹಣ್ಣಿನ ರಸ- ರುಚಿಗೆ ತಕ್ಕಷ್ಟು

ಉಪ್ಪು- ಸ್ವಲ್ಪ

ತೆಂಗಿನಕಾಯಿ ತುರಿ- 1ಬಟ್ಟಲು

ಮಾಡುವ ವಿಧಾನ ಹೀಗಿದೆ

ಮೊದಲಿಗೆ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಮೆಂತ್ಯ ಹಾಕಿ ಒಗ್ಗರಣೆ ಮಾಡಿಕೊಳ್ಳುವುದರೊಂದಿಗೆ ಕೆಂಪಗೆ ಹುರಿದುಕೊಳ್ಳಬೇಕು. ಆ ನಂತರ ಬೇಳೆಯೊಂದಿಗೆ ಸೇರಿಸಿ ಚೆನ್ನಾಗಿ ಬೇಯಿಸಬೇಕು.

ಇನ್ನೊಂದೆಡೆ ಒಣಮೆಣಸನ್ನು ಕೆಂಪಗೆ ಹುರಿದು, ಕರಿಬೇವು ಸೊಪ್ಪನ್ನು ಬೆಂಕಿಯಲ್ಲಿ ಬಾಡಿಸಿ ಕಾಯಿಯೊಂದಿಗೆ ಸೇರಿಸಿ ಮೂರನ್ನು ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಬಳಿಕ ಅದನ್ನು ಬೇಯಿಸಿದ ಬೇಳೆಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುಣಸೆ ರಸವನ್ನು (ಸ್ವಲ್ಪ ಜಾಸ್ತಿಯೇ) ಹಾಕಿ ಕುದಿಸಿದರೆ ಮೆಂತ್ಯ ಹುಳಿ ರೆಡಿಯಾಗುತ್ತದೆ.