ಸ್ವಾದಿಷ್ಟಕರ ಮಸಾಲೆ ಹುಳಿ ಚಿತ್ರಾನ್ನ ಮಾಡುವುದು ಹೀಗೆ....

ಸ್ವಾದಿಷ್ಟಕರ ಮಸಾಲೆ ಹುಳಿ ಚಿತ್ರಾನ್ನ ಮಾಡುವುದು ಹೀಗೆ....

LK   ¦    Jul 03, 2018 12:29:56 PM (IST)
ಸ್ವಾದಿಷ್ಟಕರ ಮಸಾಲೆ ಹುಳಿ ಚಿತ್ರಾನ್ನ ಮಾಡುವುದು ಹೀಗೆ....

ಚಿತ್ರಾನ್ನವನ್ನು ಮನೆಗಳಲ್ಲಿ ಆಗಾಗ್ಗೆ ಮಾಡುತ್ತಿರುತ್ತಾರೆ. ತಕ್ಷಣಕ್ಕೆ ಆಗುವ ಚಿತ್ರಾನ್ನವನ್ನು ಕೆಲವರು ಇಷ್ಟಪಟ್ಟರೆ ಮತ್ತೆ ಕೆಲವರು ಮುಖ ಸಿಂಡರಿಸಿಕೊಂಡು ತಿನ್ನುತ್ತಾರೆ. ಆದರೆ ಇದೇ ಚಿತ್ರಾನ್ನಕ್ಕೆ ಒಂದಷ್ಟು ಮಸಾಲೆ ಪದಾರ್ಥಗಳನ್ನು ಬೆರೆಸಿ ತಯಾರು ಮಾಡಿದರೆ ಇನ್ನಷ್ಟು ರುಚಿಕರವಾಗಿರುತ್ತದೆ. ಚಿತ್ರಾನ್ನದಲ್ಲೇ ರುಚಿಕರವಾದ ಮಸಾಲೆ ಹುಳಿ ಚಿತ್ರಾನ್ನ ಮಾಡಿ ನೋಡಿ ಇದು ಮಾಮೂಲಿ ಚಿತ್ರಾನ್ನಕ್ಕಿಂತ ರುಚಿಯಲ್ಲಿ ಭಿನ್ನವಾಗಿರುವುದರಿಂದ ಮುಖ ಸಿಂಡರಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಮಸಾಲೆ ಹುಳಿ ಚಿತ್ರಾನ್ನಕ್ಕೆ ಬೇಕಾಗುವ ಪದಾರ್ಥಗಳು

ಅನ್ನ- 2ಬಟ್ಟಲು

ಹುಣಸೆಹಣ್ಣಿನ ರಸ- 1ಚಮಚ

ಈರುಳ್ಳಿ-2

ಹಸಿ ಮೆಣಸಿನ ಕಾಯಿ-2

ಒಣಮೆಣಸು-2

ಸಾಸಿವೆ- ಒಂದು ಚಮಚ

ಜೀರಿಗೆ-2ಚಮಚ

ಅರಿಶಿಣ-ಚಿಟಿಕೆ

ಮೆಂತ್ಯ-ಅರ್ಧ ಚಮಚ

ಉದ್ದಿನಬೇಳೆ- ಸ್ವಲ್ಪ

ಎಳ್ಳು 2ಚಮಚ

ಕಡ್ಲೆಕಾಯಿ ಬೀಜ

ಕಾಯಿತುರಿ

ಕೊತ್ತಂಬರಿಸೊಪ್ಪು

ನಿಂಬೆರಸ

ಕರಿಬೇವು ಸೊಪ್ಪು

ಎಣ್ಣೆ

ಮಾಡುವ ವಿಧಾನ ಹೀಗಿದೆ..

ಒಂದು ಕಡೆ ಅನ್ನ ಮಾಡಿಟ್ಟುಕೊಂಡು ಮತ್ತೊಂದು ಕಡೆ ಬಾಣಲೆಯಲ್ಲಿ ಎಣ್ಣೆ ಹಾಕದೆ ನಿಧಾನ ಉರಿಯಲ್ಲಿ ಜೀರಿಗೆ, ಮೆಂತ್ಯ, ಸಾಸಿವೆ, ಎಳ್ಳನ್ನು ಹುರಿದು ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಅನ್ನವು ಉದುರುವಂತೆ ಇರಬೇಕು. ಅದನ್ನು ಅಗಲ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಬೇಕು. ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಮೊದಲಿಗೆ ಕಡಲೆ ಬೀಜವನ್ನು ಅದರಲ್ಲಿ ಹಾಕಿ ಚೆನ್ನಾಗಿ ಹುರಿದು ತೆಗೆದಿಟ್ಟು ಕೊಳ್ಳಬೇಕು.

ಆ ನಂತರ ಎಣ್ಣೆಗೆ ಸ್ವಲ್ಪ ಸಾಸಿವೆ ಹಾಕಿ ಸಿಡಿಸಿ ಅದಕ್ಕೆ ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಹಚ್ಚಿದ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಇದಕ್ಕೆ ಒಣ ಮೆಣಸನ್ನು ಹಾಕಬೇಕು. ಸ್ವಲ್ಪ ಬಾಡಿಸಿ ಬಳಿಕ ಹುಣಸೇ ರಸ, ಸ್ವಲ್ಪ ನಿಂಬೆ ರಸ, ಅರಿಶಿಣ ಉಪ್ಪು ಹಾಕಿ ಒಂದೆರಡು ನಿಮಿಷ ಬಾಡಿಸಿ ಒಗ್ಗರಣೆಯನ್ನು ಕೆಳಗಿಳಿಸಿ ಅದನ್ನು ಅನ್ನದ ಮೇಲೆ ಹಾಕಿ ಜತೆಗೆ ಹುರಿದಿಟ್ಟ ಕಡಲೆಬೀಜವನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ಆ ನಂತರ ಮೊದಲು ಮಾಡಿಟ್ಟುಕೊಂಡಿದ್ದ ಮಸಾಲೆ ಪುಡಿಯನ್ನು ಅದರ ಮೇಲೆ ಉದುರಿಸಬೇಕು. ಬಳಿಕ ಚೆನ್ನಾಗಿ ಕೈನಿಂದಲೇ ಮಿಕ್ಸ್ ಮಾಡಿ ಅದರ ಮೇಲೆ ಕಾಯಿ ತುರಿ ಕೊತ್ತಂಬರಿ ಸೊಪ್ಪನ್ನು ಬೆರೆಸಬೇಕು. ಸ್ವಲ್ಪ ಹೊತ್ತು ಬಿಟ್ಟು ಸೇವಿಸಿದರೆ ರುಚಿಕರವಾಗಿರುತ್ತದೆ.