ಕಾಫಿ ಜತೆಗಿರಲಿ ಬಿಸಿಬಿಸಿ ಮಶ್ರೂಮ್ ಬಜ್ಜಿ

ಕಾಫಿ ಜತೆಗಿರಲಿ ಬಿಸಿಬಿಸಿ ಮಶ್ರೂಮ್ ಬಜ್ಜಿ

LK   ¦    Apr 07, 2019 01:32:20 PM (IST)
ಕಾಫಿ ಜತೆಗಿರಲಿ ಬಿಸಿಬಿಸಿ ಮಶ್ರೂಮ್ ಬಜ್ಜಿ

ಕಾಫಿ ಜತೆಗೆ ಬಜ್ಜಿ ಸೇವಿಸೋದು ಒಂಥರಾ ಮುದ ಕೊಡುತ್ತದೆ. ಅದರಲ್ಲೂ ಸೇವಿಸೋ ಬಜ್ಜಿ ಮಶ್ರೂಮ್‍ನದ್ದಾಗಿದ್ದರೆ ಇನ್ನೂ ಮಜಾವಾಗಿರುತ್ತದೆ. ಹಾಗಾದರೆ ಮಶ್ರೂಮ್ ಬಜ್ಜಿ ಹೇಗೆ ಮಾಡೋದು ಎಂದು ಆಲೋಚನೆ ಮಾಡುತ್ತಿದ್ದೀರಾ? ಇಲ್ಲಿದೆ ಅದರ ಬಗೆಗಿನ ಮಾಹಿತಿ.

ಮಶ್ರೂಮ್ ಬಜ್ಜಿಗೆ ಬೇಕಾಗುವ ಪದಾರ್ಥಗಳು

ದುಂಡು ಅಣಬೆ- 200ಗ್ರಾಂ

ಕಡಲೆಹಿಟ್ಟು- ಅರ್ಧ ಬಟ್ಟಲು

ಉಪ್ಪು- ರುಚಿಗೆ ತಕ್ಕಷ್ಟು

ಖಾರದಪುಡಿ- ಒಂದು ಚಮಚ

ಜೀರಿಗೆಪುಡಿ- ಅರ್ಧ ಚಮಚ

ಅಡುಗೆಸೋಡಾ- ಚಿಟಿಕೆಯಷ್ಟು

ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ಮಶ್ರೂಮ್ ಬಜ್ಜಿ ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಮಶ್ರೂಮ್ ತೆಗೆದುಕೊಂಡು ಶುಚಿ ಮಾಡಿಕೊಂಡು ಅದನ್ನು ಅಡ್ಡವಾಗಿ ಸೀಳಿ ಎರಡು ಭಾಗ ಮಾಡಿಕೊಳ್ಳಬೇಕು. ಇನ್ನೊಂದು ಅಗಲವಾದ ಪಾತ್ರೆ ತೆಗೆದುಕೊಂಡು ಅದರಲ್ಲಿ ಕಡಲೆಹಿಟ್ಟು ಹಾಕಿ ಅದಕ್ಕೆ ಉಪ್ಪು, ಖಾರದಪುಡಿ, ಜೀರಿಗೆಪುಡಿ ಸೋಡಾ ಅಗತ್ಯ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿಕೊಳ್ಳಬೇಕು.

ಇದಾದ ನಂತರ ಬಾಣಲೆಯಲ್ಲಿ ಎಣ್ಣೆಯಿಟ್ಟು ಅದು ಕಾದ ಬಳಿಕ ಮಶ್ರೂಮ್‍ನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಚೆನ್ನಾಗಿ ಕಂದು ಬರುವ ತನಕ ಕರಿದು ತೆಗೆದರೆ ಮಶ್ರೂಮ್ ಬಜ್ಜಿ ಸೇವಿಸಲು ಸಿದ್ಧವಾದಂತೆಯೇ..