ಬಿರಿಯಾನಿ ಜಗಳ ಬಿಟ್ಹಾಕಿ....ಫಿಶ್ ಬಿರಿಯಾನಿ ಮಾಡಿ ತಿನ್ನಿ

ಬಿರಿಯಾನಿ ಜಗಳ ಬಿಟ್ಹಾಕಿ....ಫಿಶ್ ಬಿರಿಯಾನಿ ಮಾಡಿ ತಿನ್ನಿ

Nov 07, 2017 02:52:12 PM (IST)
ಬಿರಿಯಾನಿ ಜಗಳ ಬಿಟ್ಹಾಕಿ....ಫಿಶ್ ಬಿರಿಯಾನಿ ಮಾಡಿ ತಿನ್ನಿ

ಇತ್ತೀಚೆಗೆ ಬಿರಿಯಾನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಾ ಇದೆ. ಆದರೆ ಬಿರಿಯಾನಿ ಇಷ್ಟಪಡದ ಜನ ತುಂಬಾ ಕಡಿಮೆ ಎನ್ನಬಹುದು. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಬಗ್ಗೆ ಪ್ರತಿಯೊಬ್ಬರು ಕೇಳಿರುತ್ತಾರೆ ಮತ್ತು ಇದರ ರುಚಿ ಕೂಡ ಸವಿದಿರಬಹುದು. ಆದರೆ ಮೀನಿ(ಫಿಶ್ )ನ ಬಿರಿಯಾನಿ ಬಗ್ಗೆ ಕೆಲವರು ಅಚ್ಚರಿಪಡುವರು. ಆದರೆ ಮೀನಿನ ಬಿರಿಯಾನಿ ಕೂಡ ಹಲವಾರು ಮಂದಿಗೆ ತುಂಬಾ ಇಷ್ಟ. ಮಲಬಾರ್ ಫಿಶ್ ಬಿರಿಯಾನಿ ತಯಾರಿಸುವುದು ಹೇಗೆ ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

ಮಲಬಾರ್ ಫಿಶ್ ಬಿರಿಯಾನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
1 ಕೆಜಿ ಸೀಸರ್ ಮೀನು
1 ಕೆಜಿ ಈರುಳ್ಳಿ
100 ಗ್ರಾಂ ಹಸಿರು ಮೆಣಸು
70 ಗ್ರಾಂ ಬೆಳ್ಳುಳ್ಳಿ
70 ಗ್ರಾಂ ಶುಂಠಿ
2 ಲಿಂಬೆಯ ಜ್ಯೂಸ್
1 ಕಪ್ ಕೊತ್ತಂಬರಿ ಎಲೆ
1 ಕಪ್ ಮೊಸರು
ರುಚಿಗೆ ತಕ್ಕಷ್ಟು ಉಪ್ಪು
1 ಕೆಜಿ ಅಕ್ಕಿ(ಕೈಮಾ ಅಕ್ಕಿ ಒಳ್ಳೆಯದು)
3 ಚಮಚ ಬೆಣ್ಣೆ
ಒಂದು ಕಪ್ ಖಾದ್ಯ ತೈಲ
1/2 ಕೆಜಿ ಟೊಮೆಟೋ
1 ಚಮಚ ಅರಶಿನ ಹುಡಿ
2 ಚಮಚ ತುಂಡು ಗೋಡಂಬಿ
2 ಚಮಚ ದ್ರಾಕ್ಷಿ
4 ಲೋಟ ನೀರು
3 ಲವಂಗ
3 ದಾಲ್ಚಿನಿ ಚಕ್ಕೆ
1 ಚಿಟಿಕೆ ಗರಂ ಮಸಾಲ


ಮಲಬಾರ್ ಫಿಶ್ ಬಿರಿಯಾನಿ ತಯಾರಿಸುವ ವಿಧಾನ
250 ಗ್ರಾಂ ಈರುಳ್ಳಿ ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಎಣ್ಣೆ ಬಿಸಿ ಮಾಡಿ ಅದಕ್ಕೆ 1/2 ಕಪ್ ಬೆಣ್ಣೆ ಹಾಕಿ. ಈರುಳ್ಳಿ ಕಂದುಬಣ್ಣಕ್ಕೆ ತಿರುಗುವ ತನಕ ಕರಿಯಿರಿ. ಗೋಡಂಬಿ ಬೀಜ ಮತ್ತು ದ್ರಾಕ್ಷಿ ಕರಿಯಿರಿ. ಇದನ್ನು ಬದಿಗೆ ತೆಗೆದಿಡಿ.
ಉಪ್ಪು ಮತ್ತು ನೀರನ್ನು ಸೇರಿಸಿ ಅದಕ್ಕೆ ಅರಶಿನ ಹುಡಿ ಹಾಕಿ ಮೀನಿಗೆ ಹಚ್ಚಿ.
ತವಾಗೆ ಎರಡು ಚಮಚದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಮೀನನ್ನು ಅರ್ಧ ಕಾಯಿಸಿ ಬದಿಗೆ ತೆಗೆದಿಡಿ.
ಆಳ ತಳದ ಪಾತ್ರೆಯಲ್ಲಿ ಮೂರು ಚಮಚ ಎಣ್ಣೆ ಬಿಸಿ ಮಾಡಿ. ಉಳಿದಿರುವ ಈರುಳ್ಳಿಯನ್ನು ಅರ್ಧ ಕಪ್ ನೀರು ಹಾಕಿ ರುಬ್ಬಿಕೊಳ್ಳಿ. ಬಿಸಿಯಾದ ಎಣ್ಣೆಗೆ ರುಬ್ಬಿಕೊಂಡ ಈರುಳ್ಳಿ ಹಾಕಿ.
ಶುಂಠಿ, ಬೆಳ್ಳುಳ್ಳಿ ಮತ್ತು ಮೆಣಸನ್ನು ಜತೆಯಾಗಿ ರುಬ್ಬಿಕೊಳ್ಳಿ. ಇದನ್ನು ಈರುಳ್ಳಿ ಪೇಸ್ಟ್ ಗೆ ಬೆರೆಸಿ. 3-4 ನಿಮಿಷ ಕಾಲ ಹುರಿಯಿರಿ.
ಟೊಮೆಟೋ, ಮೊಸರು ಮತ್ತು ಉಪ್ಪು ಹಾಕಿ. ನೀರು ಆವಿಯಾಗುವ ತನಕ ಬೇಯಿಸಿ. ಕರಿದಿರುವ ಮೀನು, ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ಜ್ಯೂಸ್ ಹಾಕಿ ಬದಿಗಿಡಿ.

ಅನ್ನ ತಯಾರಿಸಲು
ಬೆಣ್ಣೆಯನ್ನು ಒಂದು ನಾನ್ ಸ್ಟಿಕ್ ತವಾಗೆ ಹಾಕಿ ಬಿಸಿ ಮಾಡಿ. 1/2 ಕತ್ತರಿಸಿಕೊಂಡಿರುವ ಈರುಳ್ಳಿ, ಏಲಕ್ಕಿ ಮತ್ತು ದಾಲ್ಚಿನಿ ಹಾಕಿ. ತೊಳೆದಿರುವ ಅಕ್ಕಿಯನ್ನು ಇದಕ್ಕೆ ಹಾಕಿಕೊಳ್ಳಿ.
ಬಿಸಿ ನೀರು ಮತ್ತು ಉಪ್ಪು ಹಾಕಿ ಹೆಚ್ಚಿನ ಬೆಂಕಿಯಲ್ಲಿ ಬೇಯಲು ಬಿಡಿ.
ಹತ್ತು ನಿಮಿಷ ಅನ್ನ ಹಾಗೆ ಇರಲಿ. ಅನ್ನದ ಮೇಲೆ ಗರಂ ಮಸಾಲ ಹುಡಿ ಹಾಕಿ.
ಆಳ ತಳದ ಪಾತ್ರೆ ತೆಗೆದುಕೊಂಡು ಅದಕ್ಕೆ ಅನ್ನದ ಒಂದು ಪದರ ಹಾಕಿ. ಸ್ವಲ್ಪ ಫಿಶ್ ಮಸಾಲ ಹಾಕಿ. ಹುರಿದಿರುವ ಈರುಳ್ಳಿ, ಬೀಜಗಳು ಮತ್ತು ದ್ರಾಕ್ಷಿ ಹಾಕಿ. ಗರಂ ಮಸಾಲ ಹಾಕಿ ಮತ್ತೊಂದು ಪದರ ಅನ್ನ ಹಾಕಿ.
ಅನ್ನದ ಮೇಲೆ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಹಾಕಿ.
ನ್ಯಾಪ್ಕಿನ್ ತೆಗೆದುಕೊಂಡು ಅದನ್ನು ನೀರು ಮತ್ತು ರೋಸ್ ವಾಟರ್ ನಲ್ಲಿ ಅದ್ದಿಕೊಂಡು ಪಾತ್ರೆಗೆ ಮುಚ್ಚಿ.
ಒಂದು ಗಂಟೆ ಕಾಲ ಕಡಿಮೆ ಬೆಂಕಿಯಲ್ಲಿ ದಮ್ ಮಾಡಿ. ಇದು ರುಚಿಯನ್ನು ಮತ್ತಷ್ಟು ಹೆಚ್ಚಿಸುವುದು.