ಆಲೂಗೆಡ್ಡೆ ಬಟಾಣಿ ಕುರ್ಮಾ ಜತೆ ಸವಿಯಿರಿ ಚಪಾತಿ, ಪರೋಟ

ಆಲೂಗೆಡ್ಡೆ ಬಟಾಣಿ ಕುರ್ಮಾ ಜತೆ ಸವಿಯಿರಿ ಚಪಾತಿ, ಪರೋಟ

LK   ¦    May 14, 2018 11:33:40 AM (IST)
ಆಲೂಗೆಡ್ಡೆ ಬಟಾಣಿ ಕುರ್ಮಾ ಜತೆ ಸವಿಯಿರಿ ಚಪಾತಿ, ಪರೋಟ

ಚಪಾತಿ, ಪರೋಟ, ದೋಸೆ ಯಾವುದೇ ಆಗಿರಲಿ ಇವುಗಳಿಗೆ ಆಲೂಗೆಡ್ಡೆ ಬಟಾಣಿ ಕುರ್ಮಾ ಹೇಳಿ ಮಾಡಿಸಿದ ಕಾಂಬಿನೇಷನ್. ಹೀಗಾಗಿ ಚಪಾತಿ, ಪರೋಟ ಹೀಗೆ ಎಲ್ಲದಕ್ಕೂ ಇದು ಸಾಥ್ ನೀಡುವುದರಿಂದ ಬಾಯಿ ಚಪ್ಪರಿಸಿಕೊಂಡು ಸೇವಿಸಲು ಅನುಕೂಲವಾಗುತ್ತದೆ. ಆಲೂಗೆಡ್ಡೆ ಬಟಾಣಿ ಕುರ್ಮಾ ಮಾಡುವುದು ಹೇಗೆ? ಇದಕ್ಕೆ ಬೇಕಾಗುವ ಪದಾರ್ಥಗಳು ಎಲ್ಲದರ ಬಗ್ಗೆ ಇಲ್ಲಿ ಮಾಹಿತಿ ಇದೆ.

ಬೇಕಾಗುವ ಪದಾರ್ಥಗಳ ವಿವರಗಳು ಹೀಗಿವೆ.

ಆಲೂಗೆಡ್ಡೆ- ಕಾಲು ಕೆಜಿ

ಹಸಿ ಬಟಾಣಿ- ಒಂದು ಪಾವು

ಈರುಳ್ಳಿ- ಒಂದು ಗೆಡ್ಡೆ

ಟೊಮ್ಯಾಟೋ-2

ಗರಂ ಮಸಾಲೆ- ಒಂದೂವರೆ ಚಮಚ

ಸಾಂಬಾರ್ ಪುಡಿ- ಒಂದು ಚಮಚ

ಸಾಸಿವೆ- ಸ್ವಲ್ಪ

ಕಡ್ಲೆಬೇಳೆ- ಸ್ವಲ್ಪ

ಚಕ್ಕೆ- ಸ್ವಲ್ಪ

ಲವಂಗ- ಸ್ವಲ್ಪ

ಕಾಯಿ ತುರಿ- ಕಾಲು ಬಟ್ಟಲು

ಜೀರಿಗೆ- ಸ್ವಲ್ಪ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಸ್ವಲ್ಪ ಒಗ್ಗರಣೆಗೆ

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಆಲೂಗೆಡ್ಡೆ ಮತ್ತು ಬಟಾಣಿಯನ್ನು ಬೇಯಿಸಿಟ್ಟುಕೊಳ್ಳಬೇಕು. (ಬೇಯಿಸಿದ ಆಲೂಗೆಡ್ಡೆಯನ್ನು ಪುಡಿ ಮಾಡಬಹುದು ಅಥವಾ ವೃತ್ತಾಕಾರದಲ್ಲಿ ಕಟ್ ಮಾಡಬಹುದು). ಮತ್ತೊಂದು ಕಡೆಯಲ್ಲಿ ಈರುಳ್ಳಿ, ಟೊಮ್ಯಾಟೋ, ಕಾಯಿ, ಜೀರಿಗೆ, ಚಕ್ಕೆ ಲವಂಗ, ಗರಂ ಮಸಾಲೆ ಮತ್ತು ಸಾಂಬಾರ್ ಪುಡಿಯನ್ನು ಚೆನ್ನಾಗಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು.

ಇದಾದ ಬಳಿಕ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಒಗ್ಗರಣೆಗೆ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಹಚ್ಚಿದ ಸ್ವಲ್ಪ ಈರುಳ್ಳಿ, ಟೊಮ್ಯಾಟೋ ಹಾಕಿ ಹುರಿಯಬೇಕು. ನಂತರ ರುಬ್ಬಿದ ಮಸಾಲೆ ಪದಾರ್ಥ ಮತ್ತು ಬೇಯಿಸಿದ ಆಲೂಗೆಡ್ಡೆ, ಬಟಾಣಿಯನ್ನು ಹಾಕಿ ಸ್ವಲ್ಪ ನೀರು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿದರೆ ಆಲೂಗೆಡ್ಡೆ ಬಟಾಣಿ ಕುರ್ಮಾ ಸೇವಿಸಲು ಸಿದ್ಧವಾಗಲಿದೆ