ಬೇಸಿಗೆಗೆ ಆರೋಗ್ಯ ನೀಡುವ ಬೀನ್ಸ್ ಮಿಕ್ಸ್ ಸಲಾಡ್

ಬೇಸಿಗೆಗೆ ಆರೋಗ್ಯ ನೀಡುವ ಬೀನ್ಸ್ ಮಿಕ್ಸ್ ಸಲಾಡ್

LK   ¦    Mar 18, 2019 03:25:17 PM (IST)
ಬೇಸಿಗೆಗೆ ಆರೋಗ್ಯ ನೀಡುವ ಬೀನ್ಸ್ ಮಿಕ್ಸ್ ಸಲಾಡ್

ನಾವು ಬೇಸಿಗೆಯಲ್ಲಿ ತರಕಾರಿ, ಹಣ್ಣುಗಳಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದೇ ಆದರೆ ಆರೋಗ್ಯಕ್ಕೂ ಉತ್ತಮ. ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸಿ ಮಾಡುವ ಖಾದ್ಯಗಳಿಗಿಂತ ಪ್ರೂಟ್, ತರಕಾರಿ ಸಲಾಡ್‍ಗಳು ಹೆಚ್ಚಾಗಿ ರುಚಿಸುತ್ತವೆ. ಬಹಳಷ್ಟು ಜನ ಬೇಸಿಗೆಯಲ್ಲಿ ಸಾಲಡ್‍ಗೆ ಮೊರೆ ಹೋಗುತ್ತಾರೆ. ಹಲವು ರೀತಿಯ ಸಲಾಡ್‍ಗಳನ್ನು ನಾವು ತಯಾರಿಸಬಹುದಾಗಿದ್ದು ಅದರಲ್ಲಿ ಬೀನ್ಸ್ ಮಿಕ್ಸ್ ಸಲಾಡ್‍ ಕೂಡ ಒಂದಾಗಿದೆ. ಬೀನ್ಸ್ ಮಿಕ್ಸ್ ಸಲಾಡ್‍ ತಯಾರಿಸಲು ಬೇಕಾಗುವ ಪದಾರ್ಥಗಳು ಹೀಗಿವೆ.

ಬೀನ್ಸ್ ಕಾಳು– ಒಂದು ಕಪ್

ಕಡಲೆ ಬೀಜ- ಒಂದು ಕಪ್

ಟೊಮ್ಯಾಟೋ- ಒಂದು

ಈರುಳ್ಳಿ- ಒಂದು

ಪನ್ನೀರ್- ಒಂದು ಕಪ್ (ಚಿಕ್ಕದಾಗಿ ತುಂಡು ಮಾಡಿದ್ದು)

ಮೆಂತೆಸೊಪ್ಪು- ಅರ್ಧ ಕಟ್ಟು

ಕೊತ್ತಂಬರಿ ಸೊಪ್ಪು- ಸ್ವಲ್ಪ

ಕಾರದ ಪುಡಿ- ಸ್ವಲ್ಪ

ಚಾಟ್ ಮಸಾಲ- ಅರ್ಧ ಚಮಚ

ಉಪ್ಪು- ರುಚಿಗೆ ತಕ್ಕಂತೆ

ಸಕ್ಕರೆ- ಒಂದು ಚಮಚ

ನಿಂಬೆ ರಸ- ಅರ್ಧ ಚಮಚ

ಕಪ್ಪು ಉಪ್ಪು- ಚಿಟಿಕೆಯಷ್ಟು

ಬೀನ್ಸ್ ಮಿಕ್ಸ್ ಸಲಾಡ್‍ ತಯಾರಿಸುವ ವಿಧಾನ ಹೀಗಿದೆ.

ಮೊದಲೇ ಬೀನ್ಸ್ ಕಾಳನ್ನು ಮೊಳಕೆ ಬರಿಸಿಟ್ಟುಕೊಳ್ಳಬೇಕು. ಸಲಾಡ್‍ ಮಾಡುವ ಸಂದರ್ಭ ಮೊಳಕೆ ಬಂದಿದ್ದ ಬೀನ್ಸ್ ಕಾಳನ್ನು ಕುದಿಯುವ ನೀರಿನಲ್ಲಿ ಹಾಕಿ ಬೇಯಿಸಿ ಬಸಿಯಬೇಕು. ಬಸಿದ ಕಾಳಿಗೆ ತಣ್ಣೀರು ಹಾಕಿ ಮತ್ತೊಮ್ಮೆ ಬಸಿಯ ಬೇಕು. ಆ ನಂತರ ಅದನ್ನು ಟವಲ್ ಮೇಲೆ ಹಾಕಿಡಬೇಕು. ಹೀಗೆ ಮಾಡುವುದರಿಂದ ಕಾಳಿನಲ್ಲಿರುವ ನೀರಿನ ಅಂಶವನ್ನು ಟವಲ್ ಎಳೆದುಕೊಳ್ಳುತ್ತದೆ. ಆ ನಂತರ ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೇಯಿಸಿದ ಕಡಲೆ ಬೀಜ, ಹಚ್ಚಿದ ಈರುಳ್ಳಿ, ಟೊಮ್ಯಟೋ, ಪನ್ನೀರು, ಉಪ್ಪು, ಮಸಾಲೆ, ಸಕ್ಕರೆ, ಮೆಂತೆ, ಕೊತ್ತಂಬರಿಸೊಪ್ಪು ಹೀಗೆ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಬಳಿಕ ಫ್ರಿಡ್ಜ್ ನಲ್ಲಿ ಸ್ವಲ್ಪ ಹೊತ್ತು ಇಟ್ಟು ಆ ನಂತರ ಸೇವಿಸಿದರೆ ಬಿಸಿಲ ಧಗೆಗೆ ತಣ್ಣಗಿನ ಬೀನ್ಸ್ ಮಿಕ್ಸ್ ಸಲಾಡ್‍ ಸವಿಯಲು ಮಜಾವಾಗಿರುತ್ತದೆ.