ಸ್ಪೈಸಿಯಾದ ಜೀರಾ ರೈಸ್ ಮಾಡಿ ನೋಡಿ!

ಸ್ಪೈಸಿಯಾದ ಜೀರಾ ರೈಸ್ ಮಾಡಿ ನೋಡಿ!

LK   ¦    Oct 29, 2018 02:37:43 PM (IST)
ಸ್ಪೈಸಿಯಾದ ಜೀರಾ ರೈಸ್ ಮಾಡಿ ನೋಡಿ!

ಎಲ್ಲ ರೀತಿಯ ರೈಸ್ ಮಾಡಿದವರು ನಾಲಗೆಗೆ ಒಂದಿಷ್ಟು ರುಚಿ, ದೇಹಕ್ಕೊಂದಿಷ್ಟು ತಂಪು ಮಾಡುವ ಜೀರಾ ರೈಸ್‍ನ್ನು ಮಾಡಿ ಸವಿಯಬಹುದಾಗಿದೆ.

ಜೀರಾ ರೈಸ್ ಮಾಡುವುದು ತುಂಬಾ ಸುಲಭ ಹೀಗಾಗಿ ಆಗೊಮ್ಮೆ ಈಗೊಮ್ಮೆ ಮನೆಯಲ್ಲೇ ಮಾಡಿಕೊಂಡು ಸೇವಿಸುವುದು ತುಂಬಾ ಒಳ್ಳೆಯದು ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಜೀರಿಗೆ ದೇಹವನ್ನು ತಂಪಾಗಿಡುವುದರಿಂದ ಇದನ್ನು ಮಾಡಿ ಸೇವಿಸಿದರೆ ಆರೋಗ್ಯವಾಗಿರಲು ಸಾಧ್ಯವಿದೆ.

ಜೀರಾ ರೈಸ್ ಮಾಡಲು ಬೇಕಾಗುವ ಪದಾರ್ಥಗಳು

ಬಾಸುಮತಿ ಅಕ್ಕಿ- ಒಂದು ಕಪ್

ಜೀರಿಗೆ- ಎರಡು ಚಮಚ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಕರಿಬೇವು- ಸ್ವಲ್ಪ

ತುಪ್ಪ- ಮೂರು ಚಮಚ

ಈರುಳ್ಳಿ-ಎರಡು

ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ

ಹಸಿಮೆಣಸು-ನಾಲ್ಕು 

ಉಪ್ಪು- ರುಚಿಗೆ ತಕ್ಕಂತೆ ಹಾಕಿಕೊಳ್ಳುವುದು

ಗೋಡಂಬಿ-ಹತ್ತು

ಜೀರಾ ರೈಸ್ ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಈರುಳ್ಳಿ, ಮೆಣಸಿನಕಾಯಿ ಹಚ್ಚಿಟ್ಟುಕೊಳ್ಳಬೇಕು. ಹಾಗೆಯೇ ಕೊತ್ತಂಬರಿ ಸೊಪ್ಪನ್ನು ಕೂಡ. ಆ ನಂತರ ಅಕ್ಕಿಯನ್ನು ತೊಳೆದು ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ನಲ್ಲಿ ಬೇಯಲು ಇಡಬೇಕು. ಅನ್ನವಾದ ಬಳಿಕ ಅದನ್ನು ತೆಗೆದಿರಿಸಿಕೊಳ್ಳಬೇಕು.

ಇನ್ನೊಂದೆಡೆ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಬೇಕು. ತುಪ್ಪ ಕಾದ ಬಳಿಕ ಅದಕ್ಕೆ ಜೀರಿಗೆ ಹಾಕಬೇಕು ಅದು ಸಿಡಿದ ಬಳಿಕ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ ಅದು ಬೆಂದು ಕಂದು ಬಣ್ಣ ಬರುತ್ತಿದ್ದಂತೆಯೇ ಕರಿಬೇವು ಸೊಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಕಾಯಿ, ಗೋಡಂಬಿ ಹಾಕಿಕೊಂಡು ಚೆನ್ನಾಗಿ ಹುರಿಯಬೇಕು. ಆ ನಂತರ ನಿಧಾನ ಉರಿ ಮಾಡಿಕೊಂಡು ಅದಕ್ಕೆ ಮಾಡಿಟ್ಟ ಅನ್ನವನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಬಳಿಕ ಒಲೆಯಿಂದ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಜೀರಾ ರೈಸ್ ರೆಡಿಯಾದಂತೆಯೇ.