ಬಾಯಲ್ಲಿ ನೀರೂರಿಸುವ ಕೊಡಗಿನ ಪಂದಿಕರಿ

ಬಾಯಲ್ಲಿ ನೀರೂರಿಸುವ ಕೊಡಗಿನ ಪಂದಿಕರಿ

LK   ¦    Sep 02, 2018 01:06:36 PM (IST)
ಬಾಯಲ್ಲಿ ನೀರೂರಿಸುವ ಕೊಡಗಿನ ಪಂದಿಕರಿ

ಕೊಡಗು ಎಂದಾಗ ಅಲ್ಲಿನ ತಿನಿಸುಗಳು ಹೆಚ್ಚು ಗಮನ ಸೆಳೆಯುತ್ತವೆ. ಅದರಲ್ಲಿಯೂ ಮಾಂಸ ಪ್ರಿಯರ ಪಂದಿ ಕರಿ ಬಾಯಲ್ಲಿ ನೀರೂರಿಸುತ್ತದೆ. ಕೊಡಗಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಪಂದಿ ಕರಿ ಇರಲೇ ಬೇಕು. ಇದೀಗ ಕೊಡಗಿನಾದ್ಯಂತ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುತ್ತಿದ್ದು ಈ ಹಬ್ಬದಲ್ಲಿ ಪಂದಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಹಂದಿಮಾಂಸದ ಸಾರನ್ನು ಕೊಡಗಿನಲ್ಲಿ ವಿಶೇಷವಾಗಿ ಮಾಡಲಾಗುತ್ತದೆ. ಹೀಗಾಗಿ ಇದು ಸಕತ್ ರುಚಿಕಟ್ಟಾಗಿ ಇರುತ್ತದೆ. ಹಂದಿ ಮಾಂಸದ ಸಾರು ಕಪ್ಪಗಿದ್ದರೆ ಮಾತ್ರ ಅದಕ್ಕೊಂದು ಟೇಸ್ಟ್ ಬರುವುದು. ಇಷ್ಟಕ್ಕೂ ಕೊಡಗಿನ ಪಂದಿಕರಿ ಹೇಗೆ ಮಾಡುವುದು ಎಂಬ ವಿಧಾನ ಇಲ್ಲಿದೆ. 

ಪಂದಿಕರಿ ತಯಾರಿಸಲು ಬೇಕಾಗುವ ಪದಾರ್ಥಗಳು

ಹಂದಿ ಮಾಂಸ- 1 ಕೆ.ಜಿ.

ಮೆಣಸು ಪುಡಿ- 2 ಚಮಚ,

ಅರಿಶಿಣ ಪುಡಿ- 2 ಚಮಚ,

ಉಪ್ಪು- 2 ಚಮಚ.

 

ಕಪ್ಪು ಬಣ್ಣದ ಮಸಾಲೆ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು

ಸಾಸಿವೆ- 2 ಚಮಚ,

ಜೀರಿಗೆ- 2 ಚಮಚ,

ದನಿಯಾ ಪುಡಿ- 2 ಚಮಚ,

ಕರಿಮೆಣಸು- 2 ಚಮಚ,

ಲವಂಗ- 2,

ಹಸಿ ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು

ಈರುಳ್ಳಿ- 6-8,

ಹಸಿ ಮೆಣಸು- 6-8,

ಬೆಳ್ಳುಳ್ಳಿ- 8-10 ಎಸಳು,

ಶುಂಠಿ- 1 50ಗ್ರಾಂ

ಜೀರಿಗೆ- 1 ಚಮಚ,

ಕರಿಬೇವು- 1 ಕಟ್ಟು,

ಕೊತ್ತಂಬರಿ ಸೊಪ್ಪು- 1 ಕಟ್ಟು.

 

ಮಾಂಸ ಬೆಂದ ನಂತರ ಅದಕ್ಕೆ ಬೆರೆಸಲು ಬೇಕಾಗುವ ಪದಾರ್ಥ:

ಕಾಚಂಪುಳಿ- 2 ಟೀ ಚಮಚ

ಕೊತ್ತಂಬರಿ ಸೊಪ್ಪು- 1 ಕಟ್ಟು

 

ಮಾಡುವ ವಿಧಾನ ಹೀಗಿದೆ: ಮೊದಲಿಗೆ ಮಾಂಸವನ್ನು ಸ್ವಚ್ಛ ಮಾಡಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು ಮಾಂಸವನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ನೀರು ಬಸಿದು ಮಾಂಸವನ್ನಿಟ್ಟುಕೊಳ್ಳಬೇಕು. ಆ ಮಾಂಸಕ್ಕೆ ಉಪ್ಪು, ಅರಿಶಿಣ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿ ಅರ್ಧಗಂಟೆಗಳ ಕಾಲ ಇಡಬೇಕು.

ಇನ್ನೊಂದು ಕಡೆ ಸಾರು ಮಾಡಲು ಬೇಕಾಗುವ ಕಪ್ಪು ಮಸಾಲೆ ಪುಡಿ ತಯಾರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಕಪ್ಪು ಮಸಾಲೆ ತಯಾರಿಕೆಗೆ ಬೇಕಾದ ಮೇಲೆ ಹೇಳಿರುವ ಪದಾರ್ಥಗಳನ್ನು ತೆಗೆದುಕೊಂಡು ಅವುಗಳನ್ನು ಪ್ರತ್ಯೇಕವಾಗಿ ಬಾಣಲೆಯಲ್ಲಿ ಹುರಿದು ಮಿಕ್ಸಿಗೆ ಹಾಕಿ ಎಲ್ಲವನ್ನೂ ಸೇರಿಸಿ ನೀರು ಹಾಕದೆ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಬೇಕು.

ಆ ನಂತರ ಹಸಿ ಮಸಾಲೆಗೆ ಬೇಕಾದ ಮೇಲೆ ಹೇಳಿದ ಪದಾರ್ಥಗಳನ್ನು ತೆಗೆದುಕೊಂಡು ಹಚ್ಚಿಟ್ಟುಕೊಳ್ಳಬೇಕು. ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಮಿಕ್ಸಿಯಲ್ಲಿ ಹೆಚ್ಚು ನುಣುಪಾಗದಂತೆ ತರಿತರಿಯಾಗಿ ರುಬ್ಬಿಟ್ಟುಕೊಳ್ಳಬೇಕು.

ಇಷ್ಟು ಮಾಡಿದ ಬಳಿಕ ಪಾತ್ರೆಯನ್ನು ಒಲೆಯ ಮೇಲಿಟ್ಟು ಚೂರು ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಹಸಿ ಮಸಾಲೆ ಹಾಕಿ ಸ್ವಲ್ಪ ನೀರು ಬೆರೆಸಿ ಕುದಿಸಬೇಕು. ನಂತರ ಮಾಂಸದ ತುಂಡುಗಳನ್ನು ಹಾಕಿ 20-30 ನಿಮಿಷ ಬೇಯಿಸಬೇಕು. ಜತೆಗೆ ತಳ ಹಿಡಿಯದಂತೆ ಆಗಾಗ ಸೌಟು ಹಾಕಿ ತಿರುಗಿಸಬೇಕು. ಆ ನಂತರ ಕಪ್ಪು ಮಸಾಲೆ ಹಾಕಿ ಚೆನ್ನಾಗಿ ಬೆರೆಸಬೇಕು. ಬೆಂದ ನಂತರ ಕಾಚಂಪುಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತಿರುವಿ ಒಲೆಯಿಂದ ಇಳಿಸಿ. ಅದರ ಮೇಲೆ ಹಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಪಂದಿಕರಿ ರೆಡಿಯಾಗುತ್ತದೆ.