ಚೆಟ್ಟಿನಾಡು ಚಿಕನ್ ಮನೆಯಲ್ಲೇ ತಯಾರಿಸಿ ರುಚಿ ನೋಡಿ

ಚೆಟ್ಟಿನಾಡು ಚಿಕನ್ ಮನೆಯಲ್ಲೇ ತಯಾರಿಸಿ ರುಚಿ ನೋಡಿ

Oct 05, 2017 03:47:51 PM (IST)
ಚೆಟ್ಟಿನಾಡು ಚಿಕನ್ ಮನೆಯಲ್ಲೇ ತಯಾರಿಸಿ ರುಚಿ ನೋಡಿ

ಆಂಧ್ರದ ಚಿಕನ್ ಚೆಟ್ಟಿನಾಡು ಜನಪ್ರಿಯ. ಇದು ಆಂಧ್ರದಲ್ಲಿ ಮಾತ್ರವಲ್ಲದೆ ಭಾರತದೆಲ್ಲೆಡೆಯು ಇಂದು ಜನಪ್ರಿಯವಾಗಿದೆ. ಇದರ ಹೆಸರು ಹೇಳುವಾಗಲೇ ಅದನ್ನು ತಿಂದವರಿಗೆ ಬಾಯಿಯಲ್ಲಿ ನೀರು ಬರುವುದು. ಆದರೆ ಹೋಟೆಲ್ ಗೆ ಹೋಗಿ ಚೆಟ್ಟಿನಾಡು ಚಿಕನ್ ತಿನ್ನುವ ಬದಲು ಮನೆಯಲ್ಲೇ ತಯಾರಿಸಿ ತಿಂದರೆ ಒಳ್ಳೆಯದಲ್ಲವೇ? ಚೆಟ್ಟಿನಾಡು ಚಿಕನ್ ಹೇಗೆ ಮಾಡಬಹುದು ಎಂದು ನೀವು ತಿಳಿಯಿರಿ.

ಐದು ಮಂದಿಗೆ ಬಡಿಸಬಹುದಾದಷ್ಟು
ತಯಾರಿಸುವ ಸಮಯ: 10 ನಿಮಿಷ
ಅಡುಗೆ ಸಮಯ: 1 ಗಂಟೆ
ಸಂಪೂರ್ಣ ಸಮಯ: 1 ಗಂಟೆ ಹತ್ತು ನಿಮಿಷ

ಬೇಕಾಗುವ ಸಾಮಗ್ರಿಗಳು
ಅರ್ಧ ಕೆಜಿ ಕೋಳಿ
75 ಮಿ.ಲೀ. ಎಣ್ಣೆ
150 ಗ್ರಾಂ ಈರುಳ್ಳಿ
100 ಗ್ರಾಂ ಟೊಮೆಟೋ
2 ಗ್ರಾಂ ದಾಲ್ಚಿನಿ ಚಕ್ಕೆ
2 ಗ್ರಾಂ ಲವಂಗ
2 ಗ್ರಾಂ ಏಲಕ್ಕಿ
5 ಗ್ರಾಂ ಜೀರಿಗೆ
2 ಗ್ರಾಂ ಕರಿಬೇವಿನ ಎಲೆ
10 ಗ್ರಾಂ ಅರಶಿನ ಹುಡಿ
ರುಚಿಗೆ ತಕ್ಕಷ್ಟು ಉಪ್ಪು
25 ಗ್ರಾಂ ಕೊತ್ತಂಬರಿ ಸೊಪ್ಪು

ಪೇಸ್ಟ್ ತಯಾರಿಸಲು
100 ಗ್ರಾಂ ಈರುಳ್ಳಿ
50 ಗ್ರಾಂ ಶುಂಠಿ
50 ಗ್ರಾಂ ಸೋಂಪು
20 ಗ್ರಾಂ ಜೀರಿಗೆ
25 ಗ್ರಾಂ ಕರಿಮೆಣಸಿನ ಕಾಳು
10 ಗ್ರಾಂ ಕೆಂಪು ಮೆಣಸು
100 ಗ್ರಾಂ ತೆಂಗಿನಕಾಯಿ

ತಯಾರಿಸುವ ವಿಧಾನ
*ಪೇಸ್ಟ್ ಗೆ ಹೇಳಿರುವ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ
*ಕೋಳಿಯನ್ನು ಸುಮಾರು 16 ತುಂಡುಗಳನ್ನಾಗಿ ಕತ್ತರಿಸಿಕೊಂಡು ಅದಕ್ಕೆ ಪೇಸ್ಟ್ ಹಾಕಿ ಕಲಸಿಡಿ.
*ಟೊಮೆಟೋ, ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ ಕತ್ತರಿಸಿಕೊಳ್ಳಿ.
*ತವಾಗೆ ಎಣ್ಣೆ ಹಾಕಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ದಾಲ್ಚಿನಿ ಚಕ್ಕೆ, ಲವಂಗ, ಏಲಕ್ಕಿ ಮತ್ತು ಜೀರಿಗೆ ಹಾಕಿ ಹುರಿಯಿರಿ.
*ಇದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ ಮತ್ತು ಕರಿಬೇವಿನ ಎಲೆ ಹಾಕಿ. ಈರುಳ್ಳಿ ಕಂದು ಆಗುವ ತನಕ ಹುರಿಯಿರಿ.
*ಟೊಮೆಟೋ ಹಾಕಿದ ಬಳಿಕ ಮತ್ತೆ ಐದು ನಿಮಿಷ ಹುರಿಯಿರಿ.
*ಕಲಸಿಟ್ಟುಕೊಂಡಿರುವ ಕೋಳಿ ಮಾಂಸ ಮತ್ತು ಅರಶಿನ ಹುಡಿ ಹಾಕಿ. ಹತ್ತು ನಿಮಿಷ ಕಾಲ ಬೇಯಿಸಿ. ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಇರಿ.
*ಉಪ್ಪು ಹಾಕಿದ ಬಳಿಕ ಬಾಯಿ ಮುಚ್ಚಿಕೊಂಡು ಬೇಯಲು ಬಿಡಿ. ಅಗತ್ಯವಿದ್ದರೆ ಹೆಚ್ಚು ಮೆಣಸು ಅಥವಾ ಕರಿಮೆಣಸು ಹಾಕಿ.
*ಬಡಿಸುವ ಮೊದಲು ಕೊತ್ತಂಬರಿ ಸೊಪ್ಪು ಸಿಂಪಡಿಸಿಕೊಳ್ಳಿ.