ಕರದಂಡು

ಕರದಂಡು

Apr 18, 2017 02:00:40 PM (IST)

ಬೇಕಾಗುವ ಪದಾರ್ಥಗಳು:
ಖರ್ಜೂರ - ಒಂದು ಕಪ್
ಬಾದಾಮಿ - ಒಂದು ಕಪ್
ಗೋಡಂಬಿ- ಒಂದು ಕಪ್
ದ್ರಾಕ್ಷಿ - ಒಂದು ಕಪ್
ಒಣ ಕೊಬ್ಬರಿ ತುರಿ - ಒಂದು ಕಪ್
ಗಸಗಸೆ - ಎರಡು ಚಮಚ
ಅಂಟು - ಕಾಲು ಬಟ್ಟಲು / ಸ್ವಲ್ಪ
ಬೆಲ್ಲ - ರುಚಿಗೆ ತಕ್ಕಂತೆ
ತುಪ್ಪ - ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಖರ್ಜೂರದ ಬೀಜ ತೆಗೆದು, ಬಾದಾಮಿ ಮತ್ತು ಗೋಡಂಬಿಯನ್ನು ಸಣ್ಣ ಸಣ್ಣ ಚೂರು ಮಾಡಿಟ್ಟುಕೊಳ್ಳಿ. ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡಿ. ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು, ಆಮೇಲೆ ದ್ರಾಕ್ಷಿ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ. ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ.  ಒಣಕೊಬ್ಬರಿ ತುರಿ ಮತ್ತು ಅಂಟು ಸಹ ಹುರಿದು ಬಾದಾಮಿ, ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಿರಬೇಕು.
ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ: ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಡಬೇಕು.